August 24, 2026
Monday, August 24, 2026
spot_img

ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್‌ ಪ್ರತಿಭಟನೆ: ವಿಧಾನಸೌಧ ಮುತ್ತಿಗೆಗೆ ಪ್ಲಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಜಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಇಂದು ಬಿಜೆಪಿ ಬೃಹತ್‌ ಪ್ರತಿಭಟನೆಗೆ ಮುಂದಾಗಿದೆ. ಮೂರು ಕಡೆಯಿಂದಲೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆ ಮಾಡಲಾಗಿದ್ದು, ಐದುನೂರಕ್ಕೂ ಅಧಿಕ ಪೊಲೀಸರು ವಿಧಾನಸೌಧದ ಬಳಿ ನೆರೆದಿದ್ದಾರೆ.

ವಿಧಾನಸೌಧದ ಸುತ್ತಮುತ್ತ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಪೊಲೀಸರು ಕೆಎಸ್‌ಆರ್‌ಪಿ ತುಕಡಿಗಳೊಂದಿಗೆ ಆಗಮಿಸಿದ್ದಾರೆ. ವಾಲ್ಮೀಕಿ ನಿಗಮ ಹಗರಣದ ಹಿನ್ನಲೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು. ಬೃಹತ್‌ ಪ್ರತಿಭಟನೆ ನಡೆಲಾಗುತ್ತದೆ ಎಂದು ಬಿಜೆಪಿ ಹೇಳಿದೆ.

ಕಳೆದ ಒಂದು ವಾರದಿಂದ ಸದನದ ಒಳಗೆ ಮತ್ತು ಹೊರಗೆ ಈ ವಿಚಾರದಲ್ಲಿ ಗದ್ದಲ ಸೃಷ್ಟಿಸಿರುವ ಬಿಜೆಪಿ, ತನ್ನ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯಲು ಮುಂದಾಗಿದೆ. ಇಂದು ಸಾವಿರಾರು ಕಾರ್ಯಕರ್ತರೊಂದಿಗೆ ಬಿಜೆಪಿ ನಾಯಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಅಖಾಡ ಸಜ್ಜುಗೊಳಿಸಿದ್ದಾರೆ.

ಪ್ರತಿಭಟನೆಗೆ ಮುಖಂಡರುಗಳ ಸಾರಥ್ಯ

ಬಿಜೆಪಿ ನಾಯಕರಾದ ಆರ್‌. ಅಶೋಕ್‌, ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ, ಎನ್. ರವಿಕುಮಾರ್, ಮತ್ತು ಪ್ರೀತಂ ಗೌಡ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಇವರೆಲ್ಲರೂ ಮೂರು ತಂಡಗಳಾಗಿ ವಿಭಜನೆಯಾಗಿದ್ದು, ಪ್ರತ್ಯೇಕವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿವೆ.

200 ಕಾರ್ಯಕರ್ತರನ್ನು ಕರೆತನ್ನಿ

ಇದು ಹಿಂದೆಂದೂ ನೋಡಿರದಂತಹ ಬೃಹತ್‌ ಪ್ರತಿಭಟನೆಯಾಗಿದ್ದು, ಬೆಂಗಳೂರಿನ ಪ್ರತೀ ವಿಧಾನಸಭಾ ಕ್ಷೇತ್ರದಿಂದ ತಲಾ 200 ಕಾರ್ಯಕರ್ತರನ್ನು ಕರೆತರಬೇಕು ಎಂದು ನಾಯಕರು ಸೂಚನೆ ನೀಡಿದ್ದಾರೆ. ಈ ಪ್ರತಿಭಟನೆಗೆ ಜೆಡಿಎಸ್‌ ಕೂಡ ಸಾಥ್‌ ನೀಡಿದ್ದು, ಪ್ರತಿಭಟನೆಯ ಕಾವು ಇನ್ನಷ್ಟು ಹೆಚ್ಚಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !