ಹೊಸದಿಗಂತ ವರದಿ ಕಲಬುರಗಿ:
ಹಿಮಾಲಯದ ಪ್ರಸಿದ್ಧ ಕೇದಾರನಾಥ ದೇವಾಲಯದ ಮಾದರಿಯಲ್ಲಿ ನಗರದ ಐತಿಹಾಸಿಕ ಕೋಟೆ ಮುಂಭಾಗದಲ್ಲಿ ನಿರ್ಮಿಸಲಾದ ಭವ್ಯ ಮಂದಿರದಲ್ಲಿ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಸೋಮವಾರ ಹಿಂದೂ ಮಹಾಗಣಪತಿ ಮೂರ್ತಿಯನ್ನು ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.

ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಐದು ಅಡಿ ಎತ್ತರದ ಹಿಂದೂ ಮಹಾಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕೋಟೆ ಮುಂಭಾಗಕ್ಕೆ ಕರೆತರಲಾಯಿತು. ಬಳಿಕ ವೇದ ಮಂತ್ರೋಚ್ಚಾರಣೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಮಧ್ಯೆ ಕೇದಾರನಾಥ ಮಾದರಿಯ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ನೆರವೇರಿತು.

ಉತ್ತರಾಖಂಡದ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಕೇದಾರನಾಥ ದೇವಾಲಯವು ಹಿಂದೂಗಳ ಪ್ರಮುಖ ಶೈವ ಕ್ಷೇತ್ರಗಳಲ್ಲಿ ಒಂದಾಗಿದ್ದು, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ವಿಶೇಷ ಸ್ಥಾನ ಪಡೆದಿದೆ. ಅದೇ ಮಾದರಿಯನ್ನು ಕಲಬುರಗಿಯಲ್ಲಿ ನಿರ್ಮಿಸುವ ಮೂಲಕ ಭಕ್ತರಿಗೆ ಕೇದಾರನಾಥ ಕ್ಷೇತ್ರದ ಆಧ್ಯಾತ್ಮಿಕ ಅನುಭೂತಿ ನೀಡುವ ಉದ್ದೇಶದಿಂದ ಈ ಪರಿಕಲ್ಪನೆ ರೂಪಿಸಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 50 ಅಡಿ ಎತ್ತರ, 40 ಅಡಿ ಉದ್ದ ಹಾಗೂ 60 ಅಡಿ ಅಗಲದ ಪ್ರದೇಶದಲ್ಲಿ ಕೇದಾರನಾಥ ದೇವಾಲಯದ ಮಾದರಿ ನಿರ್ಮಿಸಲಾಗಿದ್ದು, ದೇವಾಲಯದ ಆವರಣದಲ್ಲಿ ಎರಡು ಅಡಿ ಎತ್ತರದ ಶಿವಲಿಂಗದ ಮಾದರಿಯನ್ನೂ ಅಳವಡಿಸಲಾಗಿದೆ. ಭವ್ಯ ನಿರ್ಮಾಣ ಹಾಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:
ಗಣೇಶೋತ್ಸವದ 21 ದಿನಗಳ ಕಾಲ ಹಿಂದೂ ಮಹಾಗಣಪತಿ ಹಾಗೂ ಶಿವಲಿಂಗಕ್ಕೆ ವಿಶೇಷ ಪೂಜೆ, ಅಭಿಷೇಕ, ಧಾರ್ಮಿಕ ಪ್ರವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆಯುವ ನಿರೀಕ್ಷೆಯಿದೆ ಎಂದು ಸಮಿತಿ ತಿಳಿಸಿದೆ.



