ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ: ಬಿಜೆಪಿ ರಾಜ್ಯಧ್ಯಕ್ಷ ನಳಿನ್‍ಕುಮಾರ್ ಕಟೀಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಪರಿವರ್ತನೆ ಯುಗ ಆರಂಭವಾಗಿದೆ. ಕೊಳ್ಳೇಗಾಲದಲ್ಲಿ ಕಾಂಗ್ರೆಸ್ಸಿನ ಭಾರತ್ ಜೋಡೋ ಆರಂಭವಾಗಿತ್ತು. ಅಲ್ಲಿ ಬಿಜೆಪಿ 7ರಲ್ಲಿ 6 ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಹುಲ್ ಗಾಂಧಿ ಹೋದಲ್ಲೆಲ್ಲ ಕಾಂಗ್ರೆಸ್ ಮುಳುಗುವ ಸಂಕೇತ ಇದೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ವಿಶ್ಲೇಷಿಸಿದರು.

ಹಾಸನದಲ್ಲಿ ಇಂದು ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಪಡೆದು ಮತ್ತೆ ಅಧಿಕಾರ ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅಸೆಂಬ್ಲಿ ಚುನಾವಣೆ ಬಳಿಕ ಸಿದ್ರಾಮಣ್ಣನ ಕುಟುಂಬ, ಬಂಡೆಯ ಕುಟುಂಬ ಮತ್ತು ಗೌಡರ ಕುಟುಂಬ ಸೇರಿ 3 ಕುಟುಂಬದವರು ನಿರುದ್ಯೋಗಿಗಳಾಗುತ್ತಾರೆ ಎಂದು ತಿಳಿಸಿದರು.

ಇವತ್ತು ಕಾಂಗ್ರೆಸ್‍ನ ಹಲವು ಪ್ರಮುಖರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದ ಹಲವು ಪ್ರಮುಖರು, ಜೆಡಿಎಸ್‍ನ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಂದಿನ ಚುನಾವಣೆಯೊಳಗೆ ಅವರೆಲ್ಲರೂ ಬಿಜೆಪಿ ಸೇರಲಿದ್ದಾರೆ ಹಾಗೂ ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ ಎಂದು ವಿವರಿಸಿದರು.

ಒಂದು ಕಾಲಘಟ್ಟದಲ್ಲಿ ಈ ಜಿಲ್ಲೆಯಲ್ಲಿ ನಮ್ಮ ಪಕ್ಷವು ಬಿ.ಬಿ.ಶಿವಪ್ಪ ಅವರ ನೇತೃತ್ವದಲ್ಲಿ 4 ಸ್ಥಾನಗಳನ್ನು ಪಡೆದಿತ್ತು. ಮುಂದಿನ ಚುನಾವಣೆಯಲ್ಲಿ 5ಕ್ಕಿಂತ ಹೆಚ್ಚು ಸ್ಥಾನ ಪಡೆದು ಜನತಾದಳ ಮುಕ್ತ ಜಿಲ್ಲೆಯಾಗಿ ಪರಿವರ್ತಿಸುವ ವಿಶ್ವಾಸವಿದೆ ಎಂದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಮ್ ಗೌಡ, ಜಿಲ್ಲಾ ಅಧ್ಯಕ್ಷ ಹೆಚ್.ಕೆ. ಸುರೇಶ್, ನಗರಸಭಾ ಅಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾ ಮತ್ತು ಮಂಡಲ ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!