ಹೊಸದಿಗಂತ ಡಿಜಿಟಲ್ ಡೆಸ್ಕ್;
ತನ್ನ ಒಡೆತನದ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಅನುಮತಿ ನಿರಾಕರಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಧರಣಿ ನಡೆಸುತ್ತಿರುವ ಶಾಸಕ ಬಸನಗೌಡ ಪಟೀಲ್ ಯತ್ನಾಳ್ ಗೆ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆ.
ಇದರ ನಡುವೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಸಿಎಂ ಸಿದ್ದರಾಮಯ್ಯ ಬುಧವಾರ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.ಸಕ್ಕರೆ ಕಾರ್ಖಾನೆ ಆರಂಭಿಸಲು ಅನುಮತಿ ನೀಡದ್ದಕ್ಕೆ ಮಾಡುತ್ತಿರುವ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. ಏನಾದರೂ ಸಮಸ್ಯೆ ಇದ್ದರೆ ಕಾನೂನಾತ್ಮಕವಾಗಿ ಬಗೆಹರಿಸೋಣ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದ ಆದೇಶದ ನಂತರವೂ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡದೇ ಇರುವುದರ ವಿರುದ್ಧ ಯತ್ನಾಳ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕೂಡ ಭೇಟಿ ನೀಡಿ ಬೆಂಬಲ ನೀಡಿದ್ದರು.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ್ದಾಗಿದೆ. ಈ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿ ಪರವಾನಗಿ ನವೀಕರಣ ಆಗಿಲ್ಲವೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಯನ್ನು ಮುಚ್ಚಿತ್ತು.
ಮಂಡಳಿಯ ತೀರ್ಮಾನದ ವಿರುದ್ಧ ಯತ್ನಾಳ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಕಾರ್ಖಾನೆ ಪುನಾರಂಭಿಸಲು ಹೈಕೋರ್ಟ್ ಕೆಲ ದಿನಗಳ ಹಿಂದೆ ಆದೇಶ ನೀಡಿತ್ತು. ಆದೇಶವನ್ನು ಪಾಲಿಸದೇ ಮಂಡಳಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿತ್ತು. ಹೀಗಾಗಿ ನ್ಯಾಯಾಲಯದ ಆದೇಶವನ್ನು ಪಾಲಿಸದ ಮಂಡಳಿ ವಿರುದ್ಧ ಯತ್ನಾಳ್ ಪ್ರತಿಭಟನೆ ಮಾಡುತ್ತಿದ್ದಾರೆ.