ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಮೋದಿ ಸರ್ಕಾರದ ವಿರುದ್ಧ ರಣತಂತ್ರ ರೂಪಿಸಲು ವಿಪಕ್ಷಗಳು ಕರ್ನಾಟಕದ ಬೆಂಗಳೂರಿನಲ್ಲಿ ಸಭೆ ಸೇರಲು ನಿರ್ಧರಿಸಿದ್ದು, ಇತ್ತ ಆಡಳಿತ ಪಕ್ಷವಾದ ಬಿಜೆಪಿ ಕೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಜುಲೈ 18ರಂದು ಬಿಜೆಪಿ (BJP) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸಭೆ ನಡೆಯಲಿದೆ.
ಸಭೆಯ ಹಿನ್ನೆಲೆ ಲೋಕಜನಶಕ್ತಿ ಪಕ್ಷದ (ರಾಮ್ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ (Chirag Paswan) ಪಾಲ್ಗೊಳ್ಳುವ ಸಾಧ್ಯತೆಯಿದೆ. ಎನ್ಡಿಎ ಸಭೆಯಲ್ಲಿ ಭಾಗವಹಿಸುವಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಯುವ ನಾಯಕನಿಗೆ ಬರೆದ ಪತ್ರವನ್ನು ಎಲ್ಜೆಪಿ (ಆರ್) ಹಂಚಿಕೊಂಡಿದೆ.
ಪ್ರಾದೇಶಿಕ ಪಕ್ಷವನ್ನು ಎನ್ಡಿಎಯ ಪ್ರಮುಖ ಘಟಕವೆಂದು ಹೇಳಿರುವ ನಡ್ಡಾ, ಬಡವರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿರುವ ಮೋದಿ ಸರ್ಕಾರದ ಪ್ರಮುಖ ಪಾಲುದಾರ ಎಲ್ಜೆಪಿ (ಆರ್) ಎಂದು ಹೇಳಿದ್ದಾರೆ.
2020 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರಚಾರಕ್ಕಾಗಿ ಬಿಹಾರದಲ್ಲಿ ಮೈತ್ರಿಯಿಂದ ಹೊರನಡೆದ ನಂತರ ದಿವಂಗತ ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರನ್ನು ಮತ್ತೆ ಎನ್ಡಿಎ ತೆಕ್ಕೆಗೆ ತರಲು ಬಿಜೆಪಿಯ ಪ್ರಯತ್ನಿಸುತ್ತಿದೆ.
NDA ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ, ಬಿಹಾರ ಮತ್ತು ಉತ್ತರ ಪ್ರದೇಶದ ಹಲವಾರು ಸಣ್ಣ ಪಕ್ಷಗಳು ಮತ್ತು ಈಶಾನ್ಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಸೇರಿದಂತೆ ಹಲವಾರು ಹೊಸ ಬಿಜೆಪಿ ಮಿತ್ರಪಕ್ಷಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.