ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಬ್ರ್ಯಾಂಡ್ ಬೆಂಗಳೂರು (Brand Bengaluru) ಅಂಗವಾಗಿ ಬೆಂಗಳೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಮತ್ತು ನಾಗರಿಕ ಸಂಘದ ಜತೆ ವಿಧಾನಸೌಧದಲ್ಲಿ ವರ್ಚುವಲ್ ಮೂಲಕ ಸಂವಾದ ನಡೆಸಿದರು.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದಲ್ಲಿ ಜಾಹೀರಾತು ಅಳವಡಿಕೆಗೆ ಹೊಸ ಪಾಲಿಸಿ ಇದೆ, ಅದನ್ನು ನಾನು ಸ್ಟಡಿ ಮಾಡುತ್ತಿದ್ದೇನೆ. ಆದಷ್ಟು ಬೇಗ ಒಂದು ಹೊಸ ರೂಪ ಕೊಡುತ್ತೇನೆ. ಎಲ್ಲರೂ ಪಾರದರ್ಶಕತೆ ಕೇಳುತ್ತಿದ್ದಾರೆ, ಅದು ಅವರ ಹಕ್ಕು. ಕರೆಂಟ್ ಈ ನಡುವೆ ಸಾಕಷ್ಟು ವ್ಯತ್ಯಯ ಆಗುತ್ತಿದೆ ಅಂತ ಹೇಳಿದ್ದಾರೆ. ನಮ್ಮ ಟೆಕ್ನಾಲಜಿ ಸರಿಯಾಗಿ ಉಪಯೋಗಿಸಿಕೊಂಡು ಹೊಸ ಕಾರ್ಯಕ್ರಮ ನೀಡಬೇಕಿದೆ ಎಂದರು.
ಅದೇ ರೀತಿ ಯಾರು ತೆರಿಗೆ ಕಟ್ಟುತ್ತಿಲ್ಲವೋ ಅವರನ್ನು ಮ್ಯಾಪಿಂಗ್ ಮಾಡಲು ಸೂಚಿಸಲಾಗಿದೆ. ಬೆಂಗಳೂರಲ್ಲಿ ತೆರಿಗೆ ಕಟ್ಟದೆ ಕಳ್ಳಾಟ ಆಡುವವರನ್ನು ಟ್ರೇಸ್ ಮಾಡಬೇಕು. ಫುಟ್ಪಾತ್ ಕ್ಲಿಯರೆನ್ಸ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೂರು ಮೇಜರ್ ನಿರ್ಧಾರಗಳನ್ನು ಈ ತಿಂಗಳ ಅಂತ್ಯದಲ್ಲಿ ಹೇಳುತ್ತೇನೆ. ಆಸ್ತಿ ಪತ್ರಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡಿ ಎಂದು ಸೂಚಿಸಿದ್ದೇನೆ. ಇನ್ನು ವೇಸ್ಟ್, ಡೆಬ್ರೀಸ್ ತಂದು ಸುರಿಯುತ್ತಿರುವುದನ್ನು ಸರಿ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಡೆಬ್ರೀಸ್ ಲೆಕ್ಕ ಕೊಡಲು ಮತ್ತು ಅದಕ್ಕಾಗಿ ಒಂದು ಸಿಸ್ಟಂ ತರಲು ಹೇಳಿದ್ದೇನೆ ಎಂದು ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಕುರಿತು ಖಾಸಗಿ ಸಂಸ್ಥೆಗಳಿಂದ ಸಲಹೆ ಸ್ವೀಕರಿಸಿದೆ. ಫೈಬರ್ ಕನೆಕ್ಷನ್ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಮಗೆ ತಿಳಿಸಿದ್ದಾರೆ. ವಾರ್ಡ್ ಮಾಡುವಾಗ ನಮ್ಮ ಅಭಿಪ್ರಾಯ ಕೇಳಿ ಎಂದು ಹೇಳಿದ್ದಾರೆ. ಫುಟ್ಪಾತ್ ಸಮಸ್ಯೆ ಬಗ್ಗೆಯೂ ಸಭೆಯಲ್ಲಿ ಸಲಹೆ ನೀಡಿದ್ದಾರೆ. ತೆರಿಗೆ ಪಾವತಿದಾರರ ಬಗ್ಗೆಯೂ ಮಾತನಾಡಿದ್ದಾರೆ. ಮಕ್ಕಳ ಅಭಿಪ್ರಾಯವನ್ನೂ ಕೇಳುವಂತೆ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಹೈಸ್ಕೂಲ್, ಕಾಲೇಜು ಮಕ್ಕಳ ಜತೆ ನಾನು ಈಗಾಗಲೇ ಮಾತಾಡಿದ್ದೇನೆ ಎಂದು ಹೇಳಿದರು.
ಇನ್ನು ಈ ಸಂವಾದದಲ್ಲಿ ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ರಾಕೇಶ್ ಸಿಂಗ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ಮಾಜಿ ಶಾಸಕಿ ಸೌಮ್ಯಾರೆಡ್ಡಿ, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯ ಆಯುಕ್ತರು ಸೇರಿ ಹಲವರು ಭಾಗಿಯಾಗಿದ್ದರು.