ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮಹಿಳಾ ಮೋರ್ಚಾ ಮಹಿಳೆಯರಿಗಾಗಿ ವಿಶೇಷವಾಗಿ ಆಯೋಜಿಸಲಾಗಿರುವ ʼಕಮಲ ಮಿತ್ರʼ ತರಬೇತಿ ಕಾರ್ಯಾಗಾರಕ್ಕೆ ಇಂದು ಚಾಲನೆ ನೀಡಲಾಯಿತು.
ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ‘ಮಹಿಳಾ ಕೇಂದ್ರಿತ’ ಸರ್ಕಾರದ ಯೋಜನೆಗಳ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.
‘ಕಮಲ ಮಿತ್ರ’ ಅಭಿಯಾನವನ್ನು ಏಪ್ರಿಲ್ ತಿಂಗಳಿನಲ್ಲಿ ಆರಂಭಿಸಲಾಗುವುದು. ಕಾರ್ಯಾಗಾರದಲ್ಲಿ ಭಾಗವಹಿಸಿದ ಮಹಿಳೆಯರಿಗೆ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದೊರೆಯುವ ಯೋಜನೆಗಳು ಮತ್ತು ದೇಶಾದ್ಯಂತದ ಮಹಿಳೆಯರಿಗೆ ಈ ಯೋಜನೆಗಳು ಹೇಗೆ ತಲುಪಲಿದೆ ಎಂಬುದರ ಕುರಿತು ವಿವರಿಸಲಾಗುತ್ತದೆ.
ಈ ಕಾರ್ಯಾಗಾರದ ಮೂಲಕ ಮಹಿಳಾ ಸ್ವಯಂಸೇವಕರು ಕೇಂದ್ರ ಸರ್ಕಾರದ ಯೋಜನೆಗಳ ಉದ್ದೇಶಗಳನ್ನು ಸ್ಥಳೀಯವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಫಲಾನುಭವಿಗಳು ಈ ಯೋಜನೆಗಳಿಂದ ಹೇಗೆ ಸಹಾಯ ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಪಡೆಯಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಪ್ರಾಧ್ಯಾಪಕರು, ವಕೀಲರು ಮತ್ತು ಸಂಶೋಧನಾ ವಿದ್ವಾಂಸರು ಸೇರಿದಂತೆ ಮಹಿಳಾ ವೃತ್ತಿಪರರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಸದಸ್ಯರು ತಿಳಿಸಿದರು.