ಹೊಸದಿಂಗತ ಡಿಜಿಟಲ್ ಡೆಸ್ಕ್:
ಹಾವೇರಿಯಲ್ಲಿ ಜ.8ರಂದು ನಡೆದ ಘಟನೆ ಕುರಿತು ಜ.೧೦ ರಂದು ಪ್ರಕರಣ ದಾಖಲಾಗಿದೆ ಅಂದರೆ ಏನರ್ಥ? ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ ಪ್ರಶ್ನಿಸಿದ್ದಾರೆ.
ಭಾನುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಂತ್ವನ ಕೇಂದ್ರಕ್ಕೆ ಭೇಟಿ ಮಾಡಿ, ಅಲ್ಲಿ ಸಂತ್ರಸ್ಥೆ ಇಲ್ಲದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಸಾಂತ್ವನ ಕೇಂದ್ರದ ನಿರ್ವಾಹಕರಿಂದ ಘಟನೆಯ ವಿವರಣೆ ಪಡೆದುಕೊಂಡಿದ್ದೇವೆ. ಪ್ರಕರಣ ತಡವಾಗಿ ದಾಖಲಾದ ಬಗ್ಗೆ ಆಕೆ ಭಯ ಬೀತಳಾಗಿದ್ದಾಳೆ ಎಂದು ತಿಳಿದುಬಂದಿದೆ ಎಂದರು.
ಇದು ಸಂಘಟನಾತ್ಮಕ ಅಪರಾಧ. ಕೇವಲ ಒಂದು ಕೇಸ್ ಅಲ್ಲ, ಬೆಳಕಿಗೆ ಬಾರದ ಇಂಥ ಹಲವು ಪ್ರಕರಣಗಳು ನಡೆದು ಹೋಗಿವೆ. ರೇಪ್ ಕೇಸ್ ನಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ಆದರೆ ಕಾಂಗ್ರೆಸ್ ನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊಟೇಲ್ ಗೆ ನುಗ್ಗಿ ಸಂತ್ರಸ್ತೆಗೆ ಥಳಿಸಿದ್ದಾರೆ. ನಂತರ ಆಕೆಯನ್ನು ಬೇರೆಡೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾರೆ. ಇಂತಹ ಕೃತ್ಯ ನಡೆದಾಗ ಎಸ್ ಐಟಿ ತಂಡ ಬರಬೇಕಿತ್ತು, ಬಂದಿದೆಯಾ? ನಾವು ಭೇಟಿಗೆ ಬರುತ್ತೇವೆ ಎಂದು ಗೊತ್ತಾದ ಕೂಡಲೇ ಆಕೆಯನ್ನು ಇಲ್ಲಿಂದ ಬೇರೆಡೆ ಶಿಫ್ಟ್ ಮಾಡಿದ್ದಾರೆ. ಸಂತ್ರಸ್ತೆ ಈಗ ಎಲ್ಲಿದ್ದಾಳೆ ಎಂಬುದೇ ಗೊತ್ತಿಲ್ಲ. ಆಕೆಯ ಆರೋಗ್ಯ ಸುಧಾರಿಸಿಲ್ಲ, ಇಂತಹ ಸಂದರ್ಭದಲ್ಲಿ ಆಕೆಯನ್ನು ತನಿಖೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಹಿಳಾ ಮೋರ್ಚಾ ಅದ್ಯಕ್ಷೆ ಕೆ.ಮಂಜುಳಾ, ಮುಖಂಡರಾದ ಶೋಭಾ ನಿಸ್ಸೀಮ ಗೌಡ ಮತ್ತಿತರರು ಉಪಸ್ಥಿತರಿದ್ದರು.