ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ (Rajasthan) ವಿಧಾನಸಭಾ ಚುನಾವಣೆಗೆ (Assembly Elections) ಬಿಜೆಪಿ ಪ್ರಣಾಳಿಕೆಯನ್ನು (Manifesto) ಬಿಡುಗಡೆ ಮಾಡಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಎಲ್‌ಪಿಜಿ (LPG) ಸಿಲಿಂಡರ್‌ಗೆ 450 ರೂ. ಸಬ್ಸಿಡಿ ಮತ್ತು 2.5 ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆ ನೀಡಿದೆ.
ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ (JP Nadda)‘ಸಂಕಲ್ಪ ಪತ್ರ’ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ (Congress) ಸರ್ಕಾರದ ಕಾಗದ ಸೋರಿಕೆ ಮತ್ತು ಇತರ ಆರೋಪಗಳ ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದು ಹೇಳಿದರು.
ಜೊತೆಗೆ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿದ ಅವರು, ಪ್ರತಿ ಜಿಲ್ಲೆಯಲ್ಲಿ ‘ಮಹಿಳಾ ಠಾಣೆ’ ಮತ್ತು ಪ್ರತಿ ಪೊಲೀಸ್ ಠಾಣೆಯಲ್ಲಿ ‘ಮಹಿಳಾ ಡೆಸ್ಕ್’ ಮತ್ತು ಪ್ರತಿ ನಗರದಲ್ಲಿ ‘ಆ್ಯಂಟಿ ರೋಮಿಯೋ ಸ್ಕ್ವಾಡ್’ ಅನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಹೆಣ್ಣುಮಗು ಜನಿಸಿದಾಗ 2 ಲಕ್ಷ ರೂ. ಉಳಿತಾಯ ಬಾಂಡ್ ಮತ್ತು ಭೂಮಿ ಹರಾಜಾದ ರೈತರಿಗೆ ಪರಿಹಾರ ನೀತಿ ಘೋಷಿಸಿದರು.
ರಾಜಸ್ಥಾನದಲ್ಲಿ ನವೆಂಬರ್ 25 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.