ಸದನದಲ್ಲಿ ಬಿಜೆಪಿ ಪ್ರತಿಭಟನೆ: ನನ್ನ ಹೇಳಿಕೆಗೆ ನಾನು ಬದ್ಧ ಎಂದ ಸಚಿವ ಜಮೀರ್ ಅಹಮ್ಮದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕರ್ನಾಟಕ ಸ್ಪೀಕರ ಸ್ಥಾನದ ಬಗ್ಗೆ ಮಾತನಾಡಿರುವ ಸಚಿವ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದ್ದು, ಅಧಿವೇಶನದಲ್ಲಿ ಧರಣಿ ಮುಂದುವರೆಸಿದೆ.

ಸ್ಕೀಕರ್ ಸ್ಥಾನಕ್ಕೆ ಅಪಮಾನ ಮಾಡಿದ ಜಮೀರ್ ಅಹಮ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್, ನನ್ನ ಹೇಳಿಕೆಗೆ ನಾನು ಬದ್ಧ. ಇದ್ದಕ್ಕಿದ್ದಂತೆ ಈ ವಿಷಯ ಎತ್ತಿಕೊಳ್ಳುವುದು ಏನಿತ್ತು? ನಾ‌ನು ಏನು ತಪ್ಪು ಮಾತಾಡಿದ್ದೇನೆ? ಹೈದರಾಬಾದ್ ಸಭೆಯಲ್ಲಿ ಯಾರೋ ಒಬ್ಬ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಅವಕಾಶ ಕೊಡಲ್ಲ ಎಂದು ಹೇಳಿದರು. ಆಗ ನಿನ್ನ ತಪ್ಪು ಭಾವನೆಯಿದೆ ಕರ್ನಾಟಕದಲ್ಲಿ 17 ಜನರಿಗೆ ಟಿಕೆಟ್ ಕೊಟ್ಟಿದ್ದಾರೆ, ಅದರಲ್ಲಿ ಒಂಬತ್ತು ಜನ ಗೆದ್ದಿದ್ದಾರೆ. 9ರಲ್ಲಿ ಐದು ಜನರಿಗೆ ಅಧಿಕಾರ ಕೊಟ್ಟಿದ್ದಾರೆ. ನನ್ನ, ರಹೀಮ್ ಖಾನ್ ಅವರನ್ನು ಮಂತ್ರಿ ಮಾಡಿದ್ದಾರೆ. ಸಲೀಂ ಅಹ್ಮದ್ ಅವರನ್ನು ಚೀಫ್ ವಿಪ್ ಮಾಡಿದ್ದಾರೆ, ನಜೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ, ಕರ್ನಾಟಕದಲ್ಲಿ ಯು.ಟಿ. ಖಾದರ್ ಅವರನ್ನು ಸ್ಪೀಕರ್ ಮಾಡಿದ್ದಾರೆ. ಸ್ಪೀಕರ್ ಅವರಿಗೆ ನನ್ನನ್ನು ಸೇರಿದಂತೆ ಬಿಜೆಪಿ ಅವರು ನಮಸ್ಕಾರ ಮಾಡಬೇಕು ಎಂದು ಹೇಳಿದ್ದೇನೆ. ಇದು ಹೇಗೆ ಅಪಮಾನ ಆಗುತ್ತದೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಸ್ಪೀಕರ್ ಸ್ಥಾನ ಕೊಟ್ಟಿದೆ. ಯಾರೇ ಇದ್ದರೂ ಪೀಠಕ್ಕೆ ನಮಸ್ಕಾರ ಮಾಡಲೇಬೇಕು ತಾನೇ? ಅಂತಹ ಸ್ಥಾನ ಕಾಂಗ್ರೆಸ್ ಕೊಟ್ಟಿದೆ ಎಂದು ಹೇಳಿದ್ದೇನೆ. ಹಿಂದುಗಳು ನಮಸ್ಕಾರ ಮಾಡಬೇಕು ಎಂದು ನಾನು ಹೇಳಿದ್ದೀನಾ? ಬಿಜೆಪಿ ಅವರಿಗೆ ಯಾವ ವಿಷಯ ಇರಲಿಲ್ಲ. ಹಾಗಾಗಿ ಇವತ್ತು ಈ ವಿಷಯ ತೆಗೆದುಕೊಂಡಿದ್ದಾರೆ. ಇದಕ್ಕೆ ಸ್ಪಷ್ಟನೆ ಕೊಡಲು ನಾನು ಸಿದ್ದವಾಗಿದ್ದೇನೆ. ಅದನ್ನು ಕೇಳಲು ಬಿಜೆಪಿಯವರು ರೆಡಿಯಾಗಿಲ್ಲ. ಬಿಜೆಪಿಯಲ್ಲಿ ಗೊಂದಲ ಇದ್ದು, ಹೊಂದಾಣಿಕೆಯಿಲ್ಲ. ಹೀಗಾಗಿ ಅವರ ಹೈಕಮಾಂಡ್ ನಿಂದ ಸೂಚನೆ ಬಂದಿದೆ‌. ಆದ್ದರಿಂದ ಬಿಜೆಪಿಯವರು‌ ಪ್ರತಿಭಟನೆ ಮಾಡುತ್ತಿದ್ದಾರೆ. ನಾನೇನೂ ತಪ್ಪು ಹೇಳಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!