ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದ್ದು, ಇದರ ವಿರುದ್ಧ ನಾಳೆ ಕಾಂಗ್ರೆಸ್ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಇತ್ತ ಬಿಜೆಪಿ ಕೂಡ ಪ್ರತಿಭಟನೆಗೆ ಮುಂದಾಗಿದ್ದು, ಇದನ್ನು ಖಂಡಿಸಿ ಸೋಮವಾರ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಎಂಪಿಗಳು ಪ್ರತಿಭಟನೆಗೆ ಆಹ್ವಾನಿಸಿದ್ದೇನೆ. ಜೆಡಿಎಸ್ ಶಾಸಕರೂ ಕೂಡ ಬರುತ್ತಾರೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರ ಜೊತೆಯೂ ಚರ್ಚೆ ಮಾಡಿದ್ದೇನೆ. ಸಿದ್ದರಾಮಯ್ಯ ಒಂದು ಕ್ಷಣವೂ ನೀವು ಸಿಎಂ ಆಗಿ ಮುಂದುವರೆಯಲು ನೈತಿಕತೆ ಇಲ್ಲ. ನೀವು ಅಧಿಕಾರದಲ್ಲಿದ್ದರೆ ಸತ್ಯಾಸತ್ಯತೆ ಹೊರಬರಲ್ಲ. ಹಾಗಾಗಿ ನೀವು ಕೂಡಲೇ ರಾಜೀನಾಮೆ ಕೊಡಿ ಎನ್ನುವುದು ನಮ್ಮ ಆಗ್ರಹ ಎಂದು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 15 ತಿಂಗಳಿಂದ ಆಡಳಿತ ಮಾಡುತ್ತಿದೆ. ಕಾಂಗ್ರೆಸ್ ನಡಿಗೆ, ಭ್ರಷ್ಟಾಚಾರದ ಕಡೆಗೆ ಈ ಘೋಷಣೆಯನ್ನ ರಾಜ್ಯದ ಜನ ಮಾತಾಡಲು ಶುರು ಮಾಡಿದ್ದಾರೆ. ಗ್ಯಾರಂಟಿ ಕೊಡುತ್ತಾರೆ, ಭ್ರಷ್ಟಾಚಾರ ಮುಕ್ತ ಆಡಳಿತದ ಗ್ಯಾರಂಟಿ ಅಂತ ನಂಬಿದ್ದರು. ದಲಿತರ ಸಾವಿನ ಗ್ಯಾರಂಟಿ ಆಗಿದೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ನಾನು ಕ್ಲೀನ್, ಕ್ಲೀನ್ ಅಂತಾರೆ. ರೀಡೂ, ಹ್ಯೂಬ್ಲೋಟ್ ವಾಚ್ ಎಲ್ಲಾ ಸೇರಿಸಿ ಕಳೆದ ಬಾರಿ ಸಿಎಂ ಆಗಿದ್ದಾಗ 65 ಕೇಸ್ ಬಿದ್ದಿತ್ತು. ಅದನ್ನ ಎಸಿಬಿಗೆ ಕೊಟ್ಟು ಕ್ಲೀನ್ ಮಾಡಿಕೊಂಡರು. ಇವರ ವಿರುದ್ಧ ಎನ್.ಆರ್ ರಮೇಶ್ ಅವರು ಅನೇಕ ದೂರು ಸಲ್ಲಿಸಿದ್ದರು. ಕ್ಲೀನ್ ಆಗಿದ್ದರೆ ಯಾವುದೇ ಆರೋಪ ಇಲ್ಲದೆ ಹೊರಗೆ ಬಂದಿದ್ದರೆ ಕ್ಲೀನ್ ಅಂತ ಹೇಳಬಹುದಿತ್ತು ಎಂದಿದ್ದಾರೆ.