ಮಂಡ್ಯದಲ್ಲಿ ಭ್ರಷ್ಟ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಹೊಸದಿಗಂತ ವರದಿ  ಮಂಡ್ಯ :

ರಾಜ್ಯದ ಭ್ರಷ್ಟ ಸರ್ಕಾರದ ವಿರುದ್ಧ ಬಿಜೆಪಿ ಕಾರ‌್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ‌್ಯಕರ್ತರು, ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇಂಧನ ಸಚಿವ ಕೆ.ಜೆ. ಜಾರ್ಜ್ ನಾಪತ್ತೆಯಾಗಿದ್ದಾರೆ. ಹುಡುಕಿಕೊಟ್ಟವರಿಗೆ ಸಿಂಗಲ್‌ಫೇಸ್ ವಿದ್ಯುತ್ ಉಚಿತ, ಕನ್ನಡಿಗರ ಹಣವನ್ನು ಹೊರ ರಾಜ್ಯದ ಚುನಾವಣೆಗೆ ಕಾಂಗ್ರೆಸ್ ಬಳಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಧಾನಿಯಲ್ಲಿ ನಡೆದಿರುವ ಐಟಿ ದಾಳಿಯಲ್ಲಿ ನೂರಾರು ಕೋಟಿ ಹಣ ಪತ್ತೆಯಾಗಿದೆ,ಹಣದ ಮೂಲ ಕಾಂಗ್ರೆಸ್ಸಿಗರಿಗೆ ಸೇರಿದ್ದಾಗಿದೆ, ಹೊರ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಗೆ ಕರ್ನಾಟಕ ಸರ್ಕಾರ ಹಣ ಸಂಗ್ರಹಿಸಿ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಕಳುಹಿಸಿಕೊಡುತ್ತಿದೆ, ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ಎಟಿಎಂ ಆಗಿ ಪರಿವರ್ತನೆಯಾಗಿದೆ, ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಸರ್ಕಾರ ಶೇ.60 ಕಮಿಷನ್ ಸರ್ಕಾರವಾಗಿ ಬದಲಾಗಿದೆ. ಅಧಿಕಾರಿಗಳಿಗೆ ಹಣ ವಸೂಲು ಮಾಡಲು ಟಾರ್ಗೆಟ್ ನೀಡಲಾಗಿದೆ, ಹಿರಿಯ ಕಲಾವಿದ ಪಂಡಿತ್ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮಕ್ಕೆ ಸಂಭಾವನೆಯಾಗಿ 5 ಲಕ್ಷ ರೂಪಾಯಿ ನೀಡುವಂತೆ ಹಾಗೂ ಅಧಿಕಾರಿಗಳಿಗೆ 3 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿದೆ. ಇದು ಸರ್ಕಾರ ಶೇ.60 ಕಮಿಷನ್ ಸರ್ಕಾರವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ, ಇದರಿಂದ ಬೆಳೆಗಳು ಒಣಗುತ್ತಿವೆ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಓದಲು ಬೆಳಕು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ರಾಜ್ಯದ ಜನತೆಗೆ ಆಳುವ ಸರ್ಕಾರ ಕತ್ತಲೆ ಭಾಗ್ಯ ಕರುಣಿಸಿದೆ ಎಂದು ದೂರಿದರು.

ಮಳೆ ಕೊರತೆಯಿಂದ ರಾಜ್ಯದ ನೂರಾರು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ, ಆದರೆ ರೈತರಿಗೆ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಅಲ್ಲಲ್ಲಿ ಗಲಭೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನ ಮಾಡಿರುವ ಪ್ರೊ. ಕೆ.ಎಸ್ ಭಗವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಬಿಜೆಪಿ ರಾಜ್ಯ ಕಾರ‌್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್, ನಗರಾಧ್ಯಕ್ಷ ವಿವೇಕ್, ಮಾಧ್ಯಮ ಸಲಹೆಗಾರ ನಾಗಾನಂದ್, ಮುಖಂಡರಾದ ಎಚ್.ಆರ್. ಅರವಿಂದ್, ಪ್ರಸನ್ನ, ಹನಿಯಂಬಾಡಿ ನಾಗರಾಜು, ಸುರೇಶ್, ಬಿ.ಟಿ. ಶಿವಲಿಂಗಯ್ಯ, ಮಹಂತಪ್ಪ, ಅಶೋಕ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!