ಹೊಸದಿಗಂತ ವರದಿ, ಹಾವೇರಿ:
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ದ ಮತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ರಸ್ತೆ ತಡೆ ನಡೆಸಿದರು. ಅದರ ಪರಿಣಾಮ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ಬಸ್ ನಿಲ್ದಾಣದ ಸುತ್ತ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಈಗಾಗಲೇ ಸಿಎಂ ವಿರುದ್ದದ ಮುಡಾ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದಂತಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ದದ ಪ್ರಾಸಿಕ್ಯೂಷನ್ ಗೆ
ರಾಜ್ಯಪಾಲರು ಅನುಮತಿದ್ದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಕೂಡಲೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೆಕೆಂದು ಪಟ್ಟು ಹಿಡಿದರು.
ಸಿಎಂ ಮತ್ತು ಡಿಸಿಎಂ ಸೇರಿದಂತೆ ಸಚಿವ ಸಂಪುಟದ ಹಲವರ ವಿರುದ್ದ ಭ್ರಷ್ಟಾಚಾರ ದ ಆರೋಪ ಕೇಳಿಬಂದಿದೆ. ಆದಾಗ್ಯೂ ಸಿಎಂ ಸಹಿತ ಸಚಿವ ಸಂಪುಟದ ಹಲವರು ಉದ್ದಟತನದ ನಡೆ ಅನುಸರಿಸಿ ಹೇಳಿಕೆ ನೀಡುತ್ತಿರುವುದು ಅವಮಾನಕರ. ಇನ್ಮಷ್ಟು ಗೌರವ ಕಳೆದುಕೊಳ್ಳದೇ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿ ಗೌರವ ಉಳಿಸಿಕೊಳ್ಳಲು ಮುಂದಾಗಿ ಎಂದು ಸಲಹೆ ಮಾಡಿದರು.
ಬಿಜೆಪಿ ಜಿಲ್ಲಾದ್ಯಕ್ಷ ಅರುಣಕುಮಾರ ಪೂಜಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಮಾಜಿ ಶಾಸಕ ಶಿವರಾಜ ಸಜ್ಜನರ, ಡಾ.ಸಂತೋಷ ಆಲದಕಟ್ಟಿ, ಡಾ.ಬಸವರಾಜ ಕೇಲಗಾರ, ನಂಜುಂಡೇಶ ಕಳ್ಳೇರ, ಲಲಿತಾ ಗುಂಡೇನಹಳ್ಳಿ, ಬಸವರಾಜ ಡೊಂಕಣ್ಣನವರ, ಸುರೇಶ ಹೊಸಮನಿ, ಸಿದ್ದರಾಜ ಕಲಕೋಟಿ ಮತ್ತಿತರರು ಇದ್ದರು.