ಇಂಧನ ಬೆಲೆ ಏರಿಕೆ ವಿರೋಧಿಸಿ ಕೊಡಗಿನಲ್ಲಿ ಬಿಜೆಪಿ ಪ್ರತಿಭಟನೆ

ದಿಗಂತ ವರದಿ ಮಡಿಕೇರಿ:

ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ವತಿಯಿಂದ ಗುರುವಾರ ವೀರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ವೀರಾಜಪೇಟೆ ಗಡಿಯಾರ ಕಂಬದ ಬಳಿ ಬಿಜೆಪಿ ವೀರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷರಾದ ಮಾಚಿಮಾಡ ರವೀಂದ್ರ, ರಾಬಿನ್ ದೇವಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಂಜು ಗಣಪತಿ, ಅಜಿತ್ ಕರುಂಬಯ್ಯ, ಬಿಜೆಪಿ ಪ್ರಮುಖ ಸಾಯಿನಾಥ್, ವಿವಿಧ ಮೋರ್ಚಾ ಹಾಗೂ ಪ್ರಕೋಷ್ಠಗಳ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಶಕ್ತಿ ಕೇಂದ್ರಗಳ ಪ್ರಮುಖರು, ಜನಪ್ರತಿನಿಧಿಗಳು, ಬೂತ್ ಅಧ್ಯಕ್ಷರು, ಕಾರ್ಯದರ್ಶಿಗಳು, ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಕಾಂಗ್ರೆಸ್ ನಾಯಕರುಗಳ ಪ್ರತಿಕೃತಿಯನ್ನು ದಹಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ರಾಜ್ಯ ಕಾಂಗ್ರೆಸ್ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದರಿಂದ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿ ಜನಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ. ಆಟೋ, ಟ್ಯಾಕ್ಸಿ ಚಾಲಕರು ಕೂಡ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆರೋಪಿಸಿದರು. ಅಲ್ಲದೆ ಸರಕಾರ ತಕ್ಷಣ ಬೆಲೆ ಇಳಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಖಂಡಿಸಿ ಸೋಮವಾರಪೇಟೆಯಲ್ಲೂ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆತಡೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ತಕ್ಷಣ ಬೆಲೆ ಇಳಿಕೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಮುಂದುವರಿಯಲು ಅಸಮರ್ಥವಾಗಿದೆ. ನೌಕರರಿಗೆ ವೇತನ ನೀಡುವುದಕ್ಕೂ ಹಣವಿಲ್ಲದ ಪರಿಸ್ಥಿತಿಯಲ್ಲಿದೆ ಎಂದು ಟೀಕಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ದರ ದುಬಾರಿಯಾಗಲಿದ್ದು, ಜನಸಾಮಾನ್ಯರಿಗೆ ಹೊರೆಯಾಗಲಿದೆ. ಜನರ ಹಾದಿ ತಪ್ಪಿಸುವುದಕ್ಕಾಗಿ ನೀಟ್ ಪರೀಕ್ಷೆಯ ಕುರಿತು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಯಾರನ್ನೂ ನಾವು ಸಮರ್ಥಿಸಿಕೊಳ್ಳುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷಯಾಗಲಿ. ಆದರೆ ಸರಕಾರ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲಿ ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!