ಹೊಸದಿಗಂತ ವರದಿ,ಮಂಡ್ಯ :
ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿ ಹಾಗೂ ಗ್ಯಾರಂಟಿ ಯೋಜನೆಗಳ ವೈಫಲ್ಯ ಖಂಡಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟಿಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ನೇತೃತ್ವದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು, ರಾಜ್ಯದ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಜನ ವಿರೋಧಿ ಆಡಳಿತ ನಡೆಸುತ್ತಿದೆ. ಪಂಚ ಗ್ಯಾರಂಟಿಗೆ ಷರತ್ತುಗಳನ್ನು ಹಾಕುವ ಮೂಲಕ ಸವಲತ್ತಿನಿಂದ ಜನರನ್ನು ವಂಚಿಸುತ್ತಿದೆ. ಅಲ್ಲದೆ ಅಲೆದಾಡುವ ಪರಿಸ್ಥಿತಿ ತಂದೊಡ್ಡಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಎಲ್ಲ ಜನರಿಗೂ ಗ್ಯಾರಂಟಿ ಸವಲತ್ತು ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಸಮರ್ಪಕವಾಗಿ ಯೋಜನೆ ಜಾರಿ ಮಾಡದೆ ವೈಫಲ್ಯ ಕಂಡಿದೆ ಎಂದು ಕಿಡಿಕಾರಿದರು.
ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಪ್ರತಿಪಕ್ಷದ 10 ಶಾಸಕರನ್ನು ಅಮಾನತು ಮಾಡಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಕಲಾಪವನ್ನು ಸುಗಮವಾಗಿ ಮುನ್ನಡೆಸಬೇಕಾದ ಸಭಾಧ್ಯಕ್ಷರು ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ. ಪ್ರತಿಪಕ್ಷದ ಶಾಸಕರ ಹಕ್ಕನ್ನು ಹತ್ತಿಕ್ಕಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀವ್ರವಾಗಿ ಕುಸಿದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 48 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮೀಯರ ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ವಿದ್ಯುತ್ ಸೇರಿದಂತೆ ಜೀವನಾವಶ್ಯಕ ಬೆಲೆಗಳು ಹೇರಳವಾಗಿ ಹೆಚ್ಚಾಗಿದ್ದು, ಜನರು ಜೀವನ ಮಾಡುವುದೇ ದುಸ್ತರವಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಬಜೆಟ್ ಅಲ್ಪಸಂಖ್ಯಾತರ ಪರ ಮಾತ್ರವಲ್ಲ, ಹಿಂದೂಗಳ ವಿರೋಧಿ, ರೈತ, ನೀರಾವರಿ ಮತ್ತು ಶಿಕ್ಷಣ ವಿರೋಧಿಯಾಗಿದೆ. ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಭಯೋತ್ಪಾದನಾ ಚಟುವಟಿಕೆ ಅಂತಾರಾಷ್ಟಿಥಯ ವ್ಯಾಪ್ತಿಯನ್ನು ಹೊಂದಿರುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಶಂಕಿತ
ಉಗ್ರರ ಬಂಧನ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರ ಮಾಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಡಾ. ಸಿದ್ದರಾಮಯ್ಯ, ಇಂಡವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಎಚ್.ಆರ್. ಅರವಿಂದ್, ಪ.ನಾ. ಸುರೇಶ್, ವಿವೇಕ್, ಸಿ.ಟಿ. ಮಂಜುನಾಥ್, ನಿತ್ಯಾನಂದ, ನಾಗಾನಂದ, ಕೆರಗೋಡು ಮಹೇಶ್, ಸೇರಿದಂತೆ ಇತರರು ಭಾಗವಹಿಸಿದ್ದರು.