ಬಿಜೆಪಿ ವಿಶೇಷ ಕಾರ್ಯಕಾರಿಣಿ: ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ಕಟೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಬಿಜೆಪಿ ಅಲೆ ಇದೆ, ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಶಾಸಕರ ಸ್ಥಾನ ಗೆದ್ದು ಮತ್ತೊಮ್ಮೆ ಸರಕಾರ ರಚಿಸಲಿದೆ ಎಂದು ನಳಿನ್‌ ಕುಮಾರ್‌ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿರುವ ಫಲಾನುಭವಿಯ ಮನಸ್ಸಿನಲ್ಲಿ ಬಿಜೆಪಿ ಪರ ಅಲೆ ಇದೆ. ವಾತಾವರಣ ನಮ್ಮ ಪರ ಇದೆ. ಬೂತ್ ವಿಜಯ, ಬೂತ್ ಸಂಕಲ್ಪ ಅಭಿಯಾನ ಅತ್ಯಂತ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ರಾಜ್ಯದ ಡಬಲ್ ಎಂಜಿನ್ ಸರಕಾರ ಅದ್ಭುತವಾಗಿ ಕೆಲಸ ನಿರ್ವಹಿಸುತ್ತಿದೆ. ಒಬ್ಬೊಬ್ಬ ಶಾಸಕರ ಕ್ಷೇತ್ರಕ್ಕೆ ಒಂದೊಂದು ಸಾವಿರ ಕೋಟಿಗೂ ಹೆಚ್ಚು ಅನುದಾನ ಬಂದಿದೆ. ಕೇಂದ್ರ- ರಾಜ್ಯ ಸರಕಾರಗಳು ಅತ್ಯಂತ ಸಮರ್ಥವಾಗಿ ಕಾರ್ಯ ಮಾಡುತ್ತಿವೆ. ರೈತ ವಿದ್ಯಾ ನಿಧಿಯಿಂದ 11 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಕ್ಕಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಆರು ಸಾವಿರ ಮತ್ತು ರಾಜ್ಯ ಸರಕಾರ ನಾಲ್ಕು ಸಾವಿರ ಕೊಡುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಬಂಜಾರ ಸಮುದಾಯಕ್ಕೆ 50 ಸಾವಿರ ಹಕ್ಕುಪತ್ರಗಳನ್ನು ಹಂಚಲಾಗಿದೆ. ಗೋವುಗಳಿಗೆ ಆಂಬುಲೆನ್ಸ್ ಆರಂಭಿಸಿದ ಪ್ರಥಮ ಸರಕಾರವಾಗಿ ಕರ್ನಾಟಕ ಗುರುತಿಸಿಕೊಂಡಿದೆ ಎಂದು ಸಾಧನೆಗಳ ವಿವರ ನೀಡಿದರು.

ಹೈನುಗಾರಿಕೆ ಬ್ಯಾಂಕ್ ತೆರೆಯಲಾಗಿದೆ. ಬೊಮ್ಮಾಯಿಯವರ ನೇತೃತ್ವ, ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯ ಮುನ್ನಡೆದಿದೆ ಎಂದರಲ್ಲದೆ, ಇವತ್ತು ಕಾಂಗ್ರೆಸ್ ಪಕ್ಷವು ಬಸ್ ಯಾತ್ರೆ ಜೊತೆಗೇ ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ಮುಂದುವರಿಸಿದೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿ ಒಬ್ಬರಿಗೆ ಕ್ಷೇತ್ರ ಹುಡುಕಾಡಿ ಮುಗಿದಿಲ್ಲ ಎಂದು ವ್ಯಂಗ್ಯವಾಗಿ ನುಡಿದರು. ಪರಮೇಶ್ವರ್, ಮುನಿಯಪ್ಪರ ಹೋರಾಟದಿಂದ ಕಾಂಗ್ರೆಸ್ ಬಸ್ ಪಂಕ್ಚರ್ ಆಗುತ್ತಿದೆ. ಕಾಂಗ್ರೆಸ್ ಕಾಳಗ ಬೀದಿಕಾಳಗವಾಗಿದೆ. ಜೆಡಿಎಸ್ ಪಂಚರತ್ನ ಯಾತ್ರೆ ಬಿಜಾಪುರ ತಲುಪುವಾಗ ಹಾಸನದಲ್ಲಿ ಮನೆಯೊಳಗೆ ಜಗಳ ಆರಂಭವಾಗಿದೆ. ಆದ್ದರಿಂದ ಬಿಜೆಪಿ ಜನರ ವಿಶ್ವಾಸದ ಪಕ್ಷವಾಗಿ ಕಾಣುತ್ತಿದೆ ಎಂದು ವಿಶ್ಲೇಷಿಸಿದರು.

ಭಾರತ ವಿಶ್ವನಾಯಕನಾಗುವ ಸಂದರ್ಭದಲ್ಲಿ ನಾವಿದ್ದೇವೆ. ಜಗತ್ತಿನ ಅತಿ ಹೆಚ್ಚು ಜನಬೆಂಬಲ ಇರುವ ನಾಯಕರಾಗಿ ಮೋದಿಜಿ ಹೊರಹೊಮ್ಮಿದ್ದಾರೆ. ಜಗತ್ತು ಇವತ್ತು ಭಾರತದ ಕಡೆ ನೋಡುತ್ತಿದೆ. ಒಂದು ಕಾಲದಲ್ಲಿ ಹಾವಾಡಿಗರ ದೇಶ, ಭಿಕ್ಷುಕರ ದೇಶ, ಸಾಲಗಾರರ ದೇಶ ಎಂದು ಕರೆಸಿಕೊಂಡಿದ್ದ ಭಾರತ ಇಂದು ಅಭಿವೃದ್ಧಿಶೀಲ- ಸಶಕ್ತ ದೇಶವಾಗಿ ಹೊರಹೊಮ್ಮಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಉಚಿತ ಕೋವಿಡ್ ಲಸಿಕೆ ಕೊಟ್ಟ ದೇಶ ಭಾರತ. ಭಾರತ ಇದೀಗ ಸ್ವಾಭಿಮಾನಿ, ಸಮೃದ್ಧಿಯ ದೇಶವಾಗಿ ಎದ್ದು ನಿಂತಿದೆ. 2009ರಿಂದ 2014ರವರೆಗೆ ಮನಮೋಹನ್ ಸಿಂಗ್ ಅವರ ಆಡಳಿತ ಇತ್ತು. ಆ ಅವಧಿಯಲ್ಲಿ ನನ್ನ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಮಂತ್ರಿ ಗ್ರಾಮ ಸಡಕ್ ಅನುದಾನ, ಸಿಆರ್‍ಎಫ್ ಫಂಡ್ ಬರುತ್ತಿರಲಿಲ್ಲ. ಆಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರಲಿಲ್ಲ. ಆದರೆ, ಇವತ್ತು ಪರಿವರ್ತನೆ ಆಗಿದೆ. ರಾಜ್ಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಪಡೆದಿದೆ. ಹಳ್ಳಿ ಹಳ್ಳಿಗೆ ಸಡಕ್ ರಸ್ತೆ ಬರುತ್ತಿದೆ. ಮನೆಮನೆಗೆ ಗಂಗಾ ಯೋಜನೆ ತಲುಪುತ್ತಿದೆ. ಗ್ರಾಮ ಪಂಚಾಯಿತಿಗೆ ಒಂದೊಂದು ಕೋಟಿ ಅನುದಾನ ಸಿಗುವಂತಾಗಿದೆ ಎಂದು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಸರಕಾರವು ಸಶಕ್ತ ಭಾರತ ನಿರ್ಮಾಣಕ್ಕೆ ಪೂರಕ ಎನಿಸಿದ ದೂರದೃಷ್ಟಿಯ ಬಜೆಟ್ ಮಂಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಿದ ಪ್ರಧಾನಿ ಮೋದಿಜಿ, ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಮತ್ತು ಧನ್ಯವಾದಗಳು ಎಂದು ತಿಳಿಸಿದರು.

ರೈತಪರ, ಮಹಿಳಾ ಪರ, ಯುವಕರಿಗೆ ಉದ್ಯೋಗ ನೀಡುವ ಬಜೆಟ್ ದೇಶದ ದಿಕ್ಕನ್ನು ಬದಲಿಸುವ ವಿಶ್ವಾಸ ಇದೆ ಎಂದ ಅವರು, ಹತ್ತಾರು ವರ್ಷಗಳಿಂದ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿಗಳನ್ನು ಕೊಡುತ್ತಾ ಬರಲಾಗುತ್ತಿದೆ. ಈ ಬಾರಿ ಕರ್ನಾಟಕಕ್ಕೆ 8 ‘ಪದ್ಮ’ ಪ್ರಶಸ್ತಿ ಲಭಿಸಿದೆ. ಹಿಂದೆ ಅರ್ಜಿ ಹಿಡಿದು ಹೋದವರಿಗೆ, ಮಂತ್ರಿಗಳ ಹಿಂದೆ ಸುತ್ತಿದವರಿಗೆ ಪ್ರಶಸ್ತಿ ಸಿಗುತ್ತಿತ್ತು. ಈಗ ಸಮಾಜದಲ್ಲಿ ತಮಟೆವಾದಕ ಮುನಿವೆಂಕಟಪ್ಪ, ರಾಣಿ ಮಾಚಯ್ಯ ಸೇರಿ ಅರ್ಹರಿಗೆ ಪ್ರಶಸ್ತಿ ಸಿಕ್ಕಿದೆ. ಎಸ್.ಎಲ್.ಭೈರಪ್ಪ, ಸುಧಾಮೂರ್ತಿ, ಎಸ್.ಎಂ.ಕೃಷ್ಣರಿಗೂ ಪ್ರಶಸ್ತಿ ಸಿಕ್ಕಿದ್ದು ಅವರೆಲ್ಲರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!