ದಾವಣಗೆರೆಯಲ್ಲಿ ಬರ ವೀಕ್ಷಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಹೊಸ ದಿಗಂತ ವರದಿ, ದಾವಣಗೆರೆ:

ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಸೋಮವಾರ ದಾವಣಗೆರೆ ತಾಲೂಕಿನಲ್ಲಿ ಪಕ್ಷದ ಮುಖಂಡರೊಂದಿಗೆ ಬರ ವೀಕ್ಷಣೆ ಮಾಡಿದರು. ಬಿಜೆಪಿ ತಂಡದ ಸಮ್ಮುಖದಲ್ಲಿ ಬೆಳೆ ಹಾನಿಗೆ ತುತ್ತಾದ ರೈತರು ಕಣ್ಣೀರು ಹಾಕುವ ಮೂಲಕ ತಮ್ಮ ಅಳಲು ತೋಡಿಕೊಂಡರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಮ್ಮಾಪುರ ಗ್ರಾಮದ ಪರಿಶಿಷ್ಟ ರೈತ ದಂಪತಿಗಳಾದ ಮರುಳಪ್ಪ, ಸಿದ್ದಮ್ಮ ಜಮೀನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ದಾವಣಗೆರೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿದ್ದ ವೇಳೆ ರೈತ ದಂಪತಿ ಕಣ್ಣೀರು ಹಾಕಿದರು.

ರೈತ ಮಹಿಳೆ ಸಿದ್ದಮ್ಮ ಮಾತನಾಡಿ, ತಮ್ಮ ಕುಟುಂಬದ ೪ ಎಕರೆ ಜಮೀನಿನಲ್ಲಿ ಇಡೀ ಮನೆಮಂದಿ ಹೊಲದಲ್ಲಿ ಕೆಲಸ ಮಾಡಿ ಮೆಕ್ಕೆಜೋಳ ಬೆಳೆದಿದ್ದೆವು. ಆದರೆ, ಮಳೆ ಕೈಕೊಟ್ಟಿದ್ದರಿಂದ ಸಾಲದ ಸುಳಿಗೆ ಸಿಲುಕಿದ್ದೇವೆ. ಬೆಳೆ ನಷ್ಟ ಆಗಿರುವುದರಿಂದ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ ಎಂದು ವಿವರಿಸಿದರು.

ರೈತ ದಂಪತಿ ಪರಿಸ್ಥಿತಿಗೆ ಮರುಗಿದ ವಿಜಯೇಂದ್ರ ಹಸಿರು ಶಾಲು ಹಾಕಿ, ಹಣ್ಣಿನ ಪುಟ್ಟಿ ನೀಡಿ, ಧೈರ್ಯ ತುಂಬಲು ಪ್ರಯತ್ನಿಸಿದರು. ಪಕ್ಕದಲ್ಲೇ ಇದ್ದ ಸಂಸದ ಡಾ.ಜಿ.ಎಂ.ಸಿದ್ದೇಶ್ವರರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು. ಬರಗಾಲದ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಧಾವಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೂ ಮನವಿ ಮಾಡುತ್ತೇನೆ ಎಂದು ವಿಜಯೇಂದ್ರ ತಿಳಿಸಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಉಪಾಧ್ಯಕ್ಷರಾದ ಟಿ.ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಮಾಜಿ ಶಾಸಕರಾದ ಪ್ರೊ.ಎನ್.ಲಿಂಗಣ್ಣ, ಎಂ.ಬಸವರಾಜ ನಾಯ್ಕ, ಮುಖಂಡರಾದ ಜಿ.ಎಸ್.ಅನಿತ್ ಕುಮಾರ, ಡಾ.ಟಿ.ಜಿ.ರವಿಕುಮಾರ, ರಾಜನಹಳ್ಳಿ ಶಿವಕುಮಾರ, ಲೋಕಿಕೆರೆ ನಾಗರಾಜ, ಕೆ.ಪ್ರಸನ್ನ ಕುಮಾರ, ಯಶವಂತರಾವ್ ಜಾಧವ್, ಪಿ.ಸಿ.ಶ್ರೀನಿವಾಸ ಭಟ್, ಜಿ.ಎಸ್.ಶ್ಯಾಮ್, ಬಿ.ಎಂ.ಸತೀಶ, ಬಿ.ಟಿ.ಸಿದ್ದಪ್ಪ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಹೆಬ್ಬಾಳ್ ಮಹೇಂದ್ರ, ಶ್ಯಾಗಲೆ ದೇವೇಂದ್ರಪ್ಪ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!