August 12, 2026
Wednesday, August 12, 2026
spot_img

ದೀದಿ ಕೋಟೆಗೆ ಲಗ್ಗೆ ಇಟ್ಟ ಬಿಜೆಪಿ: ಟಿಎಂಸಿ ತೊರೆದು ಕಮಲ ಪಾಳಯ ಸೇರಿದ ನಾಯಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಪ್ರಮುಖ ನಾಯಕರಾಗಿದ್ದ ಸುಷ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್ ಅವರು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಈ ಮೂವರು ನಾಯಕರು, ಈಗ ಕೊಲ್ಕತ್ತಾದಲ್ಲಿ ಕೇಸರಿ ಧ್ವಜ ಹಿಡಿದಿದ್ದಾರೆ.

ಸಾಲ್ಟ್ ಲೇಕ್ ಕಚೇರಿಯಲ್ಲಿ ಅದ್ಧೂರಿ ಸ್ವಾಗತ

ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪರಾಜಯಗೊಂಡ ನಂತರ ಪಕ್ಷದಲ್ಲಿ ಆಂತರಿಕ ಅಸಮಾಧಾನ ಸ್ಫೋಟಗೊಂಡಿತ್ತು. ಇದರ ಬೆನ್ನಲ್ಲೇ ಈ ಮೂವರು ನಾಯಕರು ತಮ್ಮ ಸಂಸದ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಇಸ್ತಿಫಾ ನೀಡಿದ್ದರು. ಕೊಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪಕ್ಷದ ರಾಜ್ಯಾಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಅವರು ಈ ನಾಯಕರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

ಬಂಗಾಳದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠ

ನಾಯಕರ ಸೇರ್ಪಡೆ ಬಳಿಕ ಮಾತನಾಡಿದ ಸಮೀಕ್ ಭಟ್ಟಾಚಾರ್ಯ, ಮೂವರು ಹಿರಿಯ ಮಾಜಿ ಸಂಸದರ ಆಗಮನದಿಂದ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಬಿಜೆಪಿ ಮತ್ತಷ್ಟು ಶಕ್ತಿಶಾಲಿಯಾಗಲಿದೆ ಎಂದಿದ್ದಾರೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೇರಿದಂತೆ ಇಡೀ ಬಿಜೆಪಿ ತಂಡವು ಈ ನಾಯಕರನ್ನು ಅತ್ಯಂತ ಸಂತೋಷದಿಂದ ಪಕ್ಷಕ್ಕೆ ಸ್ವಾಗತಿಸಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !