ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಗಲಿದೆ ನಂಬರ್ 1 ಪಕ್ಷ: ಪ್ರಶಾಂತ್ ಕಿಶೋರ್

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯೂ ನಂಬರ್ 1 ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್, ಬಿಜೆಪಿ ದಕ್ಷಿಣ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ತನ್ನ ಎಲೆ ಬೇರುಗಳನ್ನು ವ್ಯಾಪಕವಾಗಿ ವಿಸ್ತರಿಸಲು ಕಳೆದ ಕೆಲ ಸಮಯದಿಂದ ಕಠಿಣವಾಗಿ ಶ್ರಮಿಸುತ್ತಿದ್ದು, ಅವರ ಶ್ರಮಕ್ಕೆ ಫಲ ಸಿಕ್ಕುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ನನ್ನ ಮನಸ್ಸು ಹೇಳುವಂತೆ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ನಂಬರ್‌ 1 ಸ್ಥಾನಕ್ಕೇರಲಿದೆ. ಒಡಿಶಾದಲ್ಲೂ ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಹಾಗೆಯೇ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ ಮೊದಲ ಅಥವಾ ಎರಡನೇ ಪಕ್ಷವಾಗಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಪ್ರಶಾಂತ್ ಕಿಶೋರ್ ಅವರು 2021 ರ ಬಂಗಾಳ ಚುನಾವಣೆಯ ಪ್ರಚಾರದಲ್ಲಿ ತೃಣಮೂಲ ಮುಖ್ಯಸ್ಥೆ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸಹಾಯ ಮಾಡಿದ್ದರು. ಆ ಚುನಾವಣೆಯಲ್ಲಿ ದೀದಿ ಅವರು ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿದ್ದರು.

ಪಶ್ಚಿಮ ಭಾರತ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ತನ್ನ ಆಟವನ್ನು ಬಿಜೆಪಿ ಗೆಲ್ಲಲು ಬಯಸಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಈ ಪ್ರದೇಶಕ್ಕೆ ಆಗಾಗ ಭೇಟಿ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಯಾರೂ ಕೂಡ ಬಿಜೆಪಿಯ ಭದ್ರಕೋಟೆಯಲ್ಲಿ ಇಂತಹ ಪ್ರಯತ್ನ ಮಾಡಿಲ್ಲ, ಪ್ರಧಾನಿ ಕಳೆದ 5 ವರ್ಷದಲ್ಲಿ ತಮಿಳುನಾಡಿಗೆ ನೀಡಿದ ಭೇಟಿಯನ್ನು ಲೆಕ್ಕ ಮಾಡಿದರೆ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರಾದ ಸೋನಿಯಾ ಆಗಲಿ ರಾಹುಲ್ ಆಗಲಿ ಅಥವಾ ಇನ್ನಾವುದೇ ನಾಯಕರಾಗಲಿ ಇಂತಹ ಪ್ರಯತ್ನ ಮಾಡಿಲ್ಲ, ಅವರು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಲ್ಲಿ ಹೋರಾಡುತ್ತಿದ್ದಾರೆ. ಆದರೆ ಮಣಿಪುರ ಮೇಘಾಲಯಕ್ಕೆ ಕೇವಲ ಪ್ರವಾಸ ಹೋಗಿದ್ದಾರೆ. ಹೀಗಿರುವಾಗ ಗೆಲುವು ಸಿಗಲು ಹೇಗೆ ಸಾಧ್ಯ ಎಂದು ಪ್ರಶಾಂತ್ ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷಗಳು ಅತ್ತ ಪ್ರಿಯರು ಅಲ್ಲ ಇತ್ತ ಪ್ರಭಾವಶಾಲಿಗಳು ಅಲ್ಲ, ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ, ಆರ್‌ಜೆಡಿ, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್‌ ಮುಂತಾದ ಪಕ್ಷಗಳು ತಮ್ಮ ಸ್ವಂತ ಅಖಾಡದಲ್ಲಿ ತಲೆ ಎತ್ತಲು ಕಷ್ಟಪಡುತ್ತಿವೆ. ಈ ಕಾರಣದಿಂದಲೇ ಬಿಜೆಪಿ ಗೆಲುವು ಸಾಧಿಸುತ್ತಿದೆ. ಈ ಪಕ್ಷಗಳಿಗೆ ಯಾವುದೇ ಮುಖವೂ ಇಲ್ಲ ಅಜೆಂಡಾವೂ ಇಲ್ಲ ಎಂದು ಪ್ರಶಾಂತ್ ಕಿಶೋರ್ ಸಂದರ್ಶನದಲ್ಲಿ ಹೇಳಿದ್ದಾರೆ.

ಕೋವಿಡ್ ಸಮಯದಲ್ಲಿ ಪ್ರಧಾನಿ ಸ್ವಲ್ಪ ಹಿನ್ನಡೆ ಅನುಭವಿಸಿದರೂ ಇದರಿಂದ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಸೋಲು ಕಂಡಿತ್ತು. ಆದರೆ ವಿರೋಧ ಪಕ್ಷದವರು ಮನೆಯಲ್ಲಿ ಕುಳಿತರು ಹಾಗೂ ಪ್ರಧಾನಿ ಮತ್ತೆ ಪುಟಿದೇಳುವಂತೆ ಮಾಡಿದರು. ನೀವು ಕ್ಯಾಚ್ ಬಿಡುತ್ತಲೇ ಹೋದರೆ ಬ್ಯಾಟ್ಸಮನ್ ಒಳ್ಳೆಯ ಬ್ಯಾಟ್ಸ್‌ಮನ್ ಆಗಿದ್ದಲ್ಲಿ ಸೆಂಚುರಿ ಬಾರಿಸುತ್ತಾನೆ ಎಂದು ಅವರು ವಿವರಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿದ್ದ 42 ಲೋಕಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳನ್ನು ಗೆದ್ದಿತ್ತು. ಈ ಮೂಲಕ 2ನೇ ಸ್ಥಾನಕ್ಕೇರಿತ್ತು, ಟಿಎಂಸಿ 22 ಸ್ಥಾನದೊಂದಿಗೆ ಮೊದಲಿತ್ತು. ನಂತರ 2021ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬಂತು. ಆದರೆ ಬಿಜೆಪಿ ಈಗ ಈ ರಾಜ್ಯದಲ್ಲಿ ಮತ್ತಷ್ಟು ಕ್ಷೇತ್ರಗಳನ್ನು ಪಡೆಯಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!