ಹೊಸದಿಗಂತ ವರದಿ ಮಡಿಕೇರಿ:
ವನ್ಯಜೀವಿ-ಮಾನವ ಸಂಘರ್ಷವನ್ನು ತಡೆಯಲು ವಿಫಲವಾದ ಹಾಗೂ ಜಿಲ್ಲೆಯನ್ನು ಕಡೆಗಣಿಸಿರುವ ರಾಜ್ಯ ಸರಕಾರದ ಧೋರಣೆಯ ವಿರುದ್ಧ ಜು.6ರಂದು ಬಿಜೆಪಿ ವತಿಯಿಂದ ಬೃಹತ್ ಜನಾಕ್ರೋಶ ವಾಹನ ಜಾಥಾ ಹಾಗೂ ಪ್ರತಿಭಟನಾ ಸಭೆ ನಡೆಯಲಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ನಿರಂತರವಾಗಿ ನಡೆದ ಕಾಡಾನೆ ಮತ್ತು ಮಾನವ ಸಂಘರ್ಷದಲ್ಲಿ ಹಲವಾರು ರೈತರು ಹಾಗೂ ಕಾರ್ಮಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಅನೇಕ ಮಂದಿ ಅಂಗವಿಕಲರಾಗಿದ್ದಾರೆ. ಕಾಡಾನೆಗಳು ಮಾತ್ರವಲ್ಲದೆ ಹುಲಿ ಮತ್ತು ಚಿರತೆ ದಾಳಿಯಿಂದ ಜಾನುವಾರುಗಳು ಹಾಗೂ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ರೈತರಿಗೆ ರಾಜ್ಯ ಸರಕಾರ ನಾಮಕಾವಸ್ಥೆಗೆ ಸಣ್ಣ ಪ್ರಮಾಣದ ಪರಿಹಾರವನ್ನು ನೀಡಿ ಕೈ ತೊಳೆದುಕೊಳ್ಳುತ್ತಿದೆ ಎಂದು ದೂರಿದರು.
ಕಾಡು ಪ್ರಾಣಿಗಳ ಹಾವಳಿಯಿಂದ ಹಾನಿಗೊಳಗಾದ ಬೆಳೆ ನಾಶಕ್ಕೆ ರೈತರಿಗೆ ಪರಿಹಾರವನ್ನು ನೀಡದೆ ಸರಕಾರ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ. ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ವಾಸದ ಮನೆ ಹಾಗೂ ಕೃಷಿ ಮಾಡಿಕೊಂಡು ಸಿ ಮತ್ತು ಡಿ ವರ್ಗದ ಭೂಮಿಯಲ್ಲಿ ಬದುಕುತ್ತಿರುವ ರೈತರು ಹಾಗೂ ಬಡವರನ್ನು ಪ್ರಸ್ತುತ ಇರುವ ರಾಜ್ಯ ಸರಕಾರ ಹಕ್ಕು ಪತ್ರ ನೀಡದೆ ಒಕ್ಕಲಬ್ಬಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ರೈತರು ಹಾಗೂ ಬಡವರ ಬಳಿ ಇರುವ ಜಮೀನನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕೆಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಹಿಡುವಳಿ ಭೂಮಿಯಲ್ಲಿರುವ ಮರದ ಮಾಲಕತ್ವದ ಹಕ್ಕನ್ನು ನೀಡದೆ ಸರಕಾರವೇ ಅರಣ್ಯ ಇಲಾಖೆಯ ಮುಖಾಂತರ ಮರಗಳ ಗಣಕೀಕರಣ ಮಾಡುತ್ತಿರುವುದು ಮುಂದಿನ ದಿನಗಳಲ್ಲಿ ಮರದ ಮಾಲಕತ್ವವನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ. ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಸಂಪ್ರದಾಯದಂತೆ ಹಲವಾರು ವರ್ಷಗಳ ಹಿಂದಿನಿಂದಲೂ ಬಳಸಿಕೊಂಡು ಬರುತ್ತಿರುವ ಪ್ರಾಣಿಗಳ ಕೊಂಬು, ಚರ್ಮ ಹಾಗೂ ನವಿಲುಗರಿಯನ್ನು ಬಳಸುವ ವಿರುದ್ಧ ರಾಜ್ಯ ಸರಕಾರ ಅರಣ್ಯ ಇಲಾಖೆಯ ಮುಖಾಂತರ ನೋಟಿಸನ್ನು ನೀಡುತ್ತಿದೆ.
ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಂಧುಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ವಸತಿ ಹಾಗೂ ಹಕ್ಕುಪತ್ರ ನೀಡಲು ವಿರೋಧಿಸುತ್ತಿರುವ ರಾಜ್ಯ ಸರಕಾರದ ಧೋರಣೆಯನ್ನು ಖಂಡಿಸಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದರು.
ಈ ಹಿಂದೆ ಪಕ್ಷದ ವತಿಯಿಂದ ಮಡಿಕೇರಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಹಾಗೂ ವೀರಾಜಪೇಟೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಜಿಲ್ಲೆಯ ಜನತೆಯ ಧ್ವನಿಯಾಗಿ ಪ್ರತಿಭಟಿಸಿ, ಜಿಲ್ಲೆಯ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಾರ್ಮಿಕ ಮುಖಂಡರ ಸಮ್ಮುಖದಲ್ಲಿ ಮೇಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಅಭಿಪ್ರಾಯ ಕ್ರೋಢೀಕರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಸಭೆ ವ್ಯವಸ್ಥೆ ಮಾಡಲು ಕೋರಲಾಗಿತ್ತು. ಆದರೆ ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಹಾಗೂ ಪ್ರತಿಷ್ಠೆಯಿಂದ ಸಭೆಯನ್ನು ನಡೆಸದೆ ಇರುವ ಕ್ರಮವನ್ನು ಖಂಡಿಸಿ ಹಾಗೂ ಇತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಜು. 6ರಂದು ಜಿಲ್ಲೆಯ ಭಾಗಮಂಡಲ, ಸೋಮವಾರಪೇಟೆ, ಕುಟ್ಟ, ಸಿದ್ದಾಪುರ, ತೊರೆನೂರಿನಿಂದ ವಾಹನ ಜಾಥಾ ಹೊರಟು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಈ ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಭಾಗವಹಿಸಲಿದ್ದಾರೆ ಎಂದರು.
ಕೊಡಗಿನ ಈ ಗಂಭೀರ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯ ಎಲ್ಲಾ ಕಾರ್ಯಕರ್ತರು, ರೈತ ಬಂಧುಗಳು, ಕಾರ್ಮಿಕರು, ಸಂಘ ಸಂಸ್ಥೆಗಳ ಪ್ರಮುಖರು, ವಾಹನ ಮಾಲಕರು, ಚಾಲಕರು, ಸಮಾಜಗಳ ಪ್ರಮುಖರು ಹಾಗೂ ನಾಗರಿಕರು ಸ್ವಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ, ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ.ಲೋಕೇಶ್, ವಕ್ತಾರ ಅರುಣ್ ಕುಮಾರ್ ಹಾಜರಿದ್ದರು.



