ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ಮತ ಎಣಿಕೆ ಮುಗಿದಿದ್ದು, ಬಿಜೆಪಿ ನೇತೃತ್ವದ ಎನ್ಡಿಎ 292 ಸ್ಥಾನಗಳನ್ನು ಗಳಿಸಿದೆ. ಇಂಡಿಯ ಬಣ 233 ಸ್ಥಾನಗಳನ್ನು ಗಳಿಸಿದೆ.
ಇತ್ತ ದಕ್ಷಿಣ ಭಾರತದ ಕೊನೆಗೂ ಕೇರಳದಲ್ಲಿ ಖಾತೆ ತೆರೆಯಲು ಯಶಸ್ವಿಯಾಗಿರುವ ಬಿಜೆಪಿ 1 ಸೀಟು ಗೆದ್ದುಕೊಂಡಿದೆ. ಆದ್ರೆ ತಮಿಳುನಾಡಿನ ಮತದಾರರು ಕೈಹಿಡಿಯಲಿಲ್ಲ. ಆದಾಗ್ಯೂ ರಾಜ್ಯದಲ್ಲಿ ಬಿಜೆಪಿಗೆ ದೊರೆತ ಮತಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
ವಿಶೇಷ ಎಂದರೆ ಬಿಜೆಪಿಗೆ ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ವೋಟಿಂಗ್ ಶೇರ್‌ನಲ್ಲಿ ಸುಮಾರು 4 ಪಟ್ಟು ಹೆಚ್ಚಳ ದಾಖಲಿಸಿದೆ. ಕಳೆದ ಬಾರಿ ಶೇ. 3.57ರಷ್ಟಿದ್ದ ಮತ ಗಳಿಕೆಯ ಪ್ರಮಾಣ ಶೇ. 11.04ಕ್ಕೆ ತಲುಪಿದೆ. ಸದ್ಯ ಇದು ಬಿಜೆಪಿಗೆ ದೊರೆತ ಜನ ಬೆಂಬಲದ ಪ್ರತೀಕ ಎಂದೇ ವಿಶ್ಲೇಷಿಸಲಾಗುತ್ತಿದೆ.
1967ರಿಂದ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸ್ಪರ್ಧೆ ನಡೆಯುತ್ತಿದೆ. ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ 10ಕ್ಕಿಂತ ಹೆಚ್ಚು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ಬಾರಿ ಬಿಜೆಪಿ 23 ಸೀಟುಗಳಲ್ಲಿ ಸ್ಪರ್ಧಿಸಿತ್ತು.
ತಮಿಳುನಾಡಿನ ಕೊಯಮತ್ತೂರು (Coimbatore) ಕ್ಷೇತ್ರದಿಂದ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಕಣಕ್ಕೆ ಇಳಿದಿದ್ದರು. ಆ ಮೂಲಕ ಕಾರ್ಯಕರ್ತರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದರು. ಅಲ್ಲದೆ ಅವರ ಸ್ಪರ್ಧೆಯಿಂದ ಈ ಕ್ಷೇತ್ರ ದೇಶದ ಗಮನ ಸೆಳೆದಿತ್ತು. ಸಮೀಕ್ಷೆಗಳೂ ಅಣ್ಣಾಮಲೈ ಜಯ ಸಾಧಿಸಬಹುದು ಎಂದು ಊಹಿಸಿದ್ದವು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಅಣ್ಣಾಮಲೈ ತಮಿಳುನಾಡಿನಲ್ಲಿ ಕಮಲ ಅರಳಿಸಲು ವಿಫಲರಾಗಿದ್ದಾರೆ.
2019ರಲ್ಲಿಯೂ ಇಲ್ಲಿ ಡಿಎಂಕೆ ತನ್ನ ಗೆಲುವು ಸಾಧಿಸಿತ್ತು. 39 ಸ್ಥಾನಗಳ ಪೈಕಿ 38 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯೂ ಡಿಎಂಕೆ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಡಿಎಂಕೆ, ಕಾಂಗ್ರೆಸ್, ಎಡಪಕ್ಷಗಳು, ದಲಿತ ಗುಂಪುಗಳು ಮತ್ತು ಅಲ್ಪಸಂಖ್ಯಾತ ಪಕ್ಷಗಳನ್ನು ಮೈತ್ರಿ ಮಾಡಿಕೊಂಡಿವೆ.