Saturday, April 1, 2023

Latest Posts

ಬಿಜೆಪಿಯಿಂದ ರಾಜ್ಯ ವಿಕಾಸದ ಸಂಕಲ್ಪ: ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವಿಜಯ ಸಂಕಲ್ಪ ಯಾತ್ರೆಯು ಬಡವರ ಕಲ್ಯಾಣದ ಸಂಕಲ್ಪವನ್ನು ಹೊಂದಿದೆ. ಇದು ರಾಜ್ಯದ ವಿಕಾಸದ ಸಂಕಲ್ಪದ ಯಾತ್ರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.

ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ 3ನೇ ರಥ ಯಾತ್ರೆಯನ್ನು ಉದ್ಘಾಟಿಸಿದ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಈ ವೇಳೆ ಇಲ್ಲಿನ ಯಾತ್ರೆಯು ಕಲ್ಯಾಣ ಕರ್ನಾಟಕದ ವಿವಿಧ ಕಡೆ ಸಂಚರಿಸಲಿದೆ. ಈ ಭಾಗದ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ನಮ್ಮದಾಗಬೇಕಿದೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ರೈಲ್ವೆಗೆ ಯುಪಿಎ ಸರಕಾರ ಕೊಟ್ಟದ್ದಕ್ಕಿಂತ 9 ಪಟ್ಟು ಹೆಚ್ಚು ಹಣ ಕೊಡಲಾಗಿದೆ. ಲಂಬಾಣಿ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದೇವೆ ಎಂದರು. ಕಾಂಗ್ರೆಸ್‍ನಲ್ಲಿ ಒಂದು ಸಿಎಂ ಕುರ್ಚಿಗಾಗಿ 10 ಜನ ನಾಯಕರಿದ್ದಾರೆ. ಇವರು ಕರ್ನಾಟಕಕ್ಕೆ ಒಳಿತನ್ನು ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಬಳಿ ಗೆಲುವಿನ ಸೂತ್ರ ಉಳಿದಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸ್ಥಿತಿ ಕುಸಿಯುತ್ತಿದೆ. ಮೋದಿಜಿ ಅವರ ಸಾವಿಗಾಗಿ ಘೋಷಣೆ ಕೂಗುತ್ತಿದ್ದಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಟೀಕೆಯಿಂದ ಕಮಲ ಇನ್ನಷ್ಟು ಪ್ರಬಲವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸದಿಂದ ನುಡಿದರು.

ವಿಕಾಸದ ವಿರೋಧಿ ಕಾಂಗ್ರೆಸ್ಸನ್ನು ಸೋಲಿಸಿ. ಮೋದಿಜಿ ಸಾವನ್ನು ಬಯಸುವ ಕಾಂಗ್ರೆಸ್ಸಿಗರ ಸೋಲಿಗೆ ಸಂಕಲ್ಪ ಕಲ್ಯಾಣ ಕರ್ನಾಟಕದ ಜನತೆಯದಾಗಲಿ ಎಂದು ಮನವಿ ಮಾಡಿದರು.

ಹೈದರಾಬಾದ್ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದ ಬಿಜೆಪಿ, ಈ ಪ್ರದೇಶದ ಅಭಿವೃದ್ಧಿಗೆ ಬದ್ಧವಿದೆ. ಗರಿಷ್ಠ ಹಣವನ್ನೂ ಈ ಭಾಗಕ್ಕೆ ಕೊಟ್ಟಿದ್ದೇವೆ ಎಂದು ನೆನಪಿಸಿದರು. ಸಿದ್ದರಾಮಯ್ಯ ಸರಕಾರವು ಕಾಂಗ್ರೆಸ್ ಎಟಿಎಂ ಆಗಿತ್ತು ಎಂದು ಆರೋಪಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕುಟುಂಬವಾದವನ್ನು ಪೋಷಿಸುವ ಪಕ್ಷಗಳು. ಜೆಡಿಎಸ್‍ಗೆ ಕೊಡುವ ಮತ ಸಂಪೂರ್ಣ ಹಾಳಾಗುತ್ತದೆ. ಅದು ಕಾಂಗ್ರೆಸ್‍ಗೆ ಮತ ಕೊಟ್ಟಂತೆ ಎಂದ ಅವರು, ಟುಕ್ಡೇ ಟುಕ್ಡೇ ಗ್ಯಾಂಗ್ ಬೆಂಬಲಿಸುವ ಆತಂಕವಾದಕ್ಕೆ ಬೆಂಬಲ ಕೊಡುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡದಿರಿ ಎಂದು ಮನವಿ ಮಾಡಿದರು.

10 ಕೋಟಿ ಶೌಚಾಲಯ ನೀಡಿದ್ದು, 13 ಕೋಟಿ ಜನರಿಗೆ ಸಿಲಿಂಡರ್, ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಕೊಡಲಾಗಿದೆ. 80 ಕೋಟಿ ಜನರಿಗೆ ಉಚಿತ ಪಡಿತರ, ಉಚಿತ ಕೋವಿಡ್ ಲಸಿಕೆ ಕೊಟ್ಟದ್ದನ್ನು ಪ್ರಸ್ತಾಪಿಸಿದರು. ಉಚಿತ ವಿಮೆ, ಆರೋಗ್ಯ ರಕ್ಷಣೆ ಕೊಟ್ಟದ್ದನ್ನು ವಿವರಿಸಿದ ಅವರು ದೇಶದ ರಕ್ಷಣೆಗಾಗಿ 370ನೇ ವಿಧಿಯನ್ನು ರದ್ದು ಮಾಡಿದ್ದನ್ನು ಜನರ ಮುಂದೆ ಪ್ರಸ್ತಾಪಿಸಿದರು.

ಕಾಂಗ್ರೆಸ್ ಮತಬ್ಯಾಂಕ್ ಪರವಾಗಿದೆ. ನಾವು ಮತಬ್ಯಾಂಕಿನ ಕಡೆ ಗಮನ ಕೊಡುತ್ತಿಲ್ಲ. ನಮಗೆ ದೇಶದ ಸುರಕ್ಷತೆ ಮುಖ್ಯ ಎಂದು ತಿಳಿಸಿದರು. ರಾಮಮಂದಿರ ಬೇಕಿತ್ತೇ ಅಥವಾ ಬೇಡವಾಗಿತ್ತೇ ಎಂದು ಪ್ರಶ್ನಿಸಿದ ಅವರು, ಮಂದಿರ ವಿಚಾರವನ್ನು ವಿಳಂಬ ಮಾಡಿದ್ದೇ ಕಾಂಗ್ರೆಸ್. ಆದರೆ ಮೋದಿಜಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದರು. ಕಾಶಿ, ಕೇದಾರನಾಥ, ಸೋಮನಾಥ ಮಂದಿರದ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರಸ್ತೆ, ವಿಮಾನನಿಲ್ದಾಣ, ನಳ್ಳಿ ನೀರಿನ ಸಂಪರ್ಕ, ಶಿಕ್ಷಣ ಕ್ಷೇತ್ರ, ನೀರಾವರಿಗೆ ಗರಿಷ್ಠ ಹಣ ನೀಡಿದ್ದನ್ನು ಅವರು ಜನರ ಗಮನಕ್ಕೆ ತಂದರು. ನಮ್ಮ ಕ್ಲಿನಿಕ್ ಸೇರಿ ಮನೆ ಮನೆಗೆ ನೀರಿನ ಸೌಕರ್ಯ ಕೊಡಲಾಗುತ್ತಿದೆ. ಕಿಸಾನ್ ಸಮ್ಮಾನ್ ಮೂಲಕ ಮೋದಿಜಿ- ಯಡಿಯೂರಪ್ಪ ಸರಕಾರ ಹಣ ನೀಡಿದ್ದನ್ನು ತಿಳಿಸಿದರು. ಬಿಜೆಪಿಗೆ ಮತ ಕೊಡಲು ಮನವಿ ಮಾಡಿದರು.

ಜಗಜ್ಯೋತಿ ಬಸವೇಶ್ವರರು ಪ್ರಜಾಪ್ರಭುತ್ವದ ಸಂದೇಶ ನೀಡಿದರು. ಮೋದಿಜಿ ಗೌರವಪೂರ್ಣವಾಗಿ ಇದನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ಸೂಚಿಸಿದ್ದರು ಎಂದು ವಿವರಿಸಿದರು.

ಯಡಿಯೂರಪ್ಪ- ಬೊಮ್ಮಾಯಿ ಅವರು ಇಲ್ಲಿನ ಅಭಿವೃದ್ಧಿಗೆ ಗರಿಷ್ಠ ಅನುದಾನ ಕೊಟ್ಟಿದ್ದಾರೆ ಎಂದು ತಿಳಿಸಿದರು. ಗುರು ನಾನಕ್ ಅವರು ಕೂಡ ಇಲ್ಲಿ ಬಂದಿದ್ದರು. ಶ್ರೀ ನರಸಿಂಹ ಝರ್ಣಿ ದೇವಸ್ಥಾನಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವು ಕರ್ನಾಟಕದ ನಾಯಕರಿಗೆ ಸದಾ ಅವಮಾನ ಮಾಡುತ್ತ ಬಂದಿದೆ. ಕರ್ನಾಟಕ, ಇಲ್ಲಿನ ನಾಯಕರಿಗೆ ಗೌರವ- ಸನ್ಮಾನ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಸಹ ಉಸ್ತುವಾರಿ ಶ್ರೀಮತಿ ಡಿ.ಕೆ.ಅರುಣಾ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿವ ಪ್ರಭು ಚೌಹಾಣ್, ಸಂಸದ ಉಮೇಶ್ ಜಾಧವ್, ಶಾಸಕ ರಘುನಾಥ ಮಲ್ಕಾಪುರೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು, ಶಾಸಕ ಶರಣು ಸಲಗರ್, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ರಾಜ್ಯ- ಜಿಲ್ಲೆ, ಸ್ಥಳೀಯ ಮುಖಂಡರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!