ಬಿಜೆಪಿಯ ಪ್ರಣಾಳಿಕೆ ಕೇವಲ ಪೊಳ್ಳು ಭರವಸೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟೀಕೆ

ಹೊಸದಿಗಂತ ಮಡಿಕೇರಿ:

ಬಿಜೆಪಿಯ ಪ್ರಣಾಳಿಕೆ ಕೇವಲ ಪೊಳ್ಳು ಭರವಸೆಯಾಗಿದ್ದು, ಅದನ್ನು ಈಡೇರಿಸುವ ಶಕ್ತಿ ಆ ಪಕ್ಷಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ನಗರದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ನಗರದ ಹೊರವಲಯದ ಹೆಲಿಪ್ಯಾಡ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ 2018 ರ ಚುನಾವಣೆಯಲ್ಲಿ 600 ಭರವಸೆಗಳನ್ನು ನೀಡಿತ್ತು.‌ಆದರೆ ಈ ಪೈಕಿ 60 ಭರವಸೆಗಳನ್ನೂ ಈಡೇರಿಸಲಿಲ್ಲ. ಯಾವುದೇ ಭರವಸೆಯನ್ನು ಬಿಜೆಪಿ ಈ ಹಿಂದೆಯೂ ಈಡೇರಿಸಿಲ್ಲ ಮುಂದೆಯೂ ಈಡೇರಿಸುವುದಿಲ್ಲ ಎಂದು ಭವಿಷ್ಯ ನುಡಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಧಿಕವಾಗಿದೆ. ಅಗತ್ಯವಸ್ತುಗಳ ಬೆಲೆ ಇಳಿಕೆಯಾಗಿಲ್ಲ. ಅಚ್ಛೇದಿನ್ ಬರಲಿಲ್ಲ. ಯಾರ ಖಾತೆಗೂ 15ಲಕ್ಷ ಹಾಕಿಲ್ಲ. ಮೋದಿ ನೀಡಿದ ಭರವಸೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕಳೆದ 10 ವರ್ಷಗಳಿಂದ ಮೋದಿ ಪ್ರಧಾನಿಯಾಗಿ ಭಾರತಕ್ಕೆ ಏನು ಮಾಡಿದ್ದಾರೆ ಎಂಬ ಬಗ್ಗೆ ಅವಲೋಕನ ನಡೆಯಲಿ. ಅದಾದ ಬಳಿಕ ಈ ಬಗ್ಗೆ ಚರ್ಚಿಸೋಣ ಎಂದರು.

ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶ್ರೀನಿವಾಸ ಪ್ರಸಾದ್‌ ಮತ್ತು ನಾನು ಸಮಕಾಲೀನರು. ನಾವಿಬ್ಬರೂ ಒಟ್ಟಿಗೆ ರಾಜಕೀಯ ಮಾಡಿದವರು. ಅವರು ಈಗ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಆದ್ದರಿಂದ ಅವರ ಆರೋಗ್ಯ ವಿಚಾರಿಸಲಷ್ಟೇ ಮನೆಗೆ ತೆರಳಿದ್ದೆ ಎಂದು ಸ್ಪಷ್ಟಪಡಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!