ವಕ್ಫ್ ವಿರುದ್ಧ ಬಿಜೆಪಿ ರಣಕಹಳೆ: ಬೀದರ್‌ನಲ್ಲಿ ʼನಮ್ಮ ಭೂಮಿ-ನಮ್ಮ ಹಕ್ಕುʼ ಆಂದೋಲನಕ್ಕೆ ಚಾಲನೆ

ಹೊಸದಿಗಂತ ವರದಿ ಬೀದರ್:

ವಕ್ಫ್ ಮಂಡಳಿ ಕಿತಾಪತಿ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಹಮ್ಮಿಕೊಂಡ “ನಮ್ಮ ಭೂಮಿ-ನಮ್ಮ ಹಕ್ಕು” ಆಂದೋಲನಕ್ಕೆ ಬುಧವಾರ ಬಸವನಾಡು ಬೀದರಿನಿಂದ ಚಾಲನೆ ನೀಡಲಾಗಿದೆ.

ರಾಜ್ಯದಲ್ಲಿ ಮೂರು ತಂಡಗಳು ಏಕಕಾಲಕ್ಕೆ ಹೋರಾಟ ಆರಂಭಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಕೇಸರಿ ಪಡೆ ರಣಕಹಳೆ ಮೊಳಗಿಸಿದೆ. ಬೀದರ್ ನಗರದ ಪ್ರಮುಖ ವ್ಯಾಪಾರಿ ಕೇಂದ್ರ ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪೂಜೆ ಸಲ್ಲಿಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು.

ಬಳಿಕ ದೇವಸ್ಥಾನದ ಪಕ್ಕದಲ್ಲೇ ರೈತರ, ಸಾರ್ವಜನಿಕ ಬೃಹತ್ ಸಮಾವೇಶ ನಡೆಯಿತು. ಇಲ್ಲಿ ಮಾತನಾಡಿದ ಪ್ರಮುಖರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೀವ ಹೋದರೂ ಚಿಂತೆಯಿಲ್ಲ, ವಕ್ಫ್ ಮಂಡಳಿಗೆ ಒಂದಿಂಚೂ ಜಾಗ ಬಿಡೇವು ಎಂದು ಗರ್ಜಿಸಿದರು. ಕಾಂಗ್ರೆಸ್ ಸರ್ಕಾರದ ಜನವಿರೋಧಿ, ರೈತ ವಿರೋಧಿ ನೀತಿ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು. ವಕ್ಫ್ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಅನ್ಯಾಯಗಳಿಗೆ ತಾರ್ಕಿಕ ಅಂತ್ಯ ಹಾಕುವವರೆಗೆ ವಿರಮಿಸುವುದಿಲ್ಲ ಎಂದು ಸಂಕಲ್ಪ ಮಾಡಿದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಕಾರ್ಯಕರ್ತರು, ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಜಿಲ್ಲಾ ಬಿಜೆಪಿ ರಚಿಸಿದ ವಕ್ಫ್ ಸಮಿತಿಯು ವಿಜಯೇಂದ್ರ ಅವರಿಗೆ ಜಿಲ್ಲೆಯಲ್ಲಿ ವಕ್ಫ್ ಮಂಡಳಿ ಮಾಡಿದ ಅನ್ಯಾಯದ ವರದಿ ಸಲ್ಲಿಸಿದರು. ಡಿ.9ರಿಂದ ಚಳಿಗಾಲದ ಅಧಿವೇಶನದಲ್ಲಿ ಎಲ್ಲ ವಿಷಯಗಳ ಕುರಿತು ಚರ್ಚಿಸಿ ಸರ್ಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಚಳವಳಿ ನಡೆಸುವುದಾಗಿ ವಿಜಯೇಂದ್ರ ಭರವಸೆ ನೀಡಿದರು.

ಶಾಸಕರಾದ ಪ್ರಭು ಚವ್ಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಡಾ.ಸಿದ್ದು ಪಾಟೀಲ್, ಬಸವರಾಜ ಮತ್ತಿಮಡು, ಮಾರುತಿರಾವ ಮುಳೆ, ಮಾಜಿ ಸಚಿವರಾದ ಭಗವಂತ ಖೂಬಾ, ಶ್ರೀರಾಮುಲು, ಡಾ.ಅಶ್ವತ್ಥನಾರಾಯಣ, ಮುರುಗೇಶ ನಿರಾಣಿ, ರೇಣುಕಾಚಾರ್ಯ, ಬೈರತಿ ಬಸವರಾಜ, ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಇತರರಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!