ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ವಿಡಿಯೋ ತೋರಿಸಿ 19 ವರ್ಷದ ಗರ್ಲ್ ಫ್ರೆಂಡ್ ಗೆ ಬ್ಲಾಕ್‌ಮೇಲ್ ಮಾಡಿ ರೂ. 2.57 ಕೋಟಿ ಸುಲಿಗೆ ಮಾಡಿದ್ದ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಚಾಮರಾಜಪೇಟೆಯ ಮೋಹನ್ ಕುಮಾರ್ (19) ಎಂದು ಗುರುತಿಸಲಾಗಿದೆ. ಕುಮಾರ್ ಮತ್ತು ಆತನ ಸ್ನೇಹಿತೆ ದೇವನಹಳ್ಳಿಯ ಖಾಸಗಿ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದರು ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಶಾಲಾ ದಿನಗಳಲ್ಲಿಯೇ ಇಬ್ಬರಲ್ಲಿ ಪ್ರೇಮಂಕುರವಾಗಿದ್ದು, ರಜಾ ದಿನಗಳಲ್ಲಿ ಯುವತಿಯವನ್ನು ಪುಸಲಾಯಿಸಿ ಪ್ರವಾಸಕ್ಕೆ ಕರೆದೊಯ್ದುತ್ತಿದ್ದ ಕುಮಾರ್, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಅಜ್ಜಿಯ ಬ್ಯಾಂಕ್ ಖಾತೆಯಿಂದ ಯುವತಿ ರೂ. 1.25 ಕೋಟಿ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ.
ಅವರು ಒಟ್ಟಿಗೆ ಇದ್ದಾಗ ರಹಸ್ಯವಾಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಫೋಟೋ ತೆಗೆದುಕೊಂಡಿದ್ದ ಕುಮಾರ್ ಗೆ ತನ್ನ ಗೆಳತಿಯ ತಂದೆ ಶ್ರೀಮಂತ ಉದ್ಯಮಿ ಎಂದು ತಿಳಿದ ನಂತರ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದ. ಆಕೆಯಿಂದ ಹಣ ಪೀಕಿಸಲು ಶುರು ಮಾಡಿದ್ದ. ಆಕೆ ನಿರಾಕರಿಸಿದಾಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮತ್ತು ಫೋಟೋ ಹಾಕುವುದಾಗಿ ಅಪ್ ಲೋಡ್ ಮಾಡಿದ್ದ. ಈ ಭಯದಿಂದ ಹೆದರಿ ಯುವತಿ ಆಕೆಯ ಅಜ್ಜಿಯ ಬ್ಯಾಂಕ್ ಖಾತೆಯಿಂದ ಕುಮಾರ್ ಹೇಳಿದ ವಿವಿಧ ಖಾತೆಗಳಿಗೆ ರೂ. 1.25 ಕೋಟಿ ವರ್ಗಾವಣೆ ಮಾಡಿದ್ದ. ಅಲ್ಲದೇ ಆಕೆಯೂ 1.32 ಕೋಟಿ ಹಣ ನೀಡಿದ್ದಳು.
ತನಗೆ ಚಿನ್ನ, ದುಬಾರಿ ವಾಚ್‌ಗಳು ಮತ್ತು ವಾಹನ ನೀಡುವಂತೆ ಕುಮಾರ್ ಯುವತಿ ಮೇಲೆ ಒತ್ತಡ ಹೇರಿದ್ದ ಎಂದು ಮೂಲಗಳು ತಿಳಿಸಿವೆ. ಆತನ ಬೇಡಿಕೆಗಳು ಹೆಚ್ಚಾಗುತ್ತಿದ್ದಂತೆ ಆಕೆಯನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದಾಗ ಯುವತಿ ಸಿಸಿಬಿಗೆ ದೂರು ನೀಡಿದ್ದಾಳೆ.
ಯುವತಿ ಕುಮಾರ್‌ನ ತಂದೆ ಮತ್ತು ಇತರರ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾಯಿಸಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಂದ 80 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ವಿಡಿಯೋಗಳನ್ನು ರೆಕಾರ್ಡ್ ಮಾಡುವಾಗ ಯುವತಿ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ