ಲೋಕಾಯುಕ್ತ ಡಿವೈಎಸ್‌ಪಿ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್, ಕಡೆಗೂ ಆರೋಪಿ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಾಯುಕ್ತ ಡಿವೈಎಸ್‌ಪಿಯ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಸದ್ಯ ಬಿಜಾಪುರ ಜೈಲಿನಲ್ಲಿರುವ ಮುರುಗಪ್ಪ (56) ಎಂಬಾತನನ್ನು ಪತ್ತೆಹಚ್ಚಲಾಗಿದೆ, ಆತನನ್ನು ಬಾಡಿ ವಾರಂಟ್​ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮುರುಗಪ್ಪ ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಪರಿಚಯಿಸಿಕೊಳ್ಳುತ್ತಿದ್ದ. ‘ನಿಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗುತ್ತಿದೆ. ಪ್ರಕರಣ ದಾಖಲಿಸಬಾರದು ಎಂದರೇ ಹಣ ನೀಡಬೇಕು’ ಎಂದು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ.

ಈ ಸಂಬಂಧ ಇತ್ತೀಚೆಗೆ ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜು ಮಗದುಮ್ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ಮೊಬೈಲ್ ನಂಬರ್‌ ಪರಿಶೀಲಿಸಿದಾಗ ಲೋಕಾಯುಕ್ತ ಡಿವೈಎಸ್ಪಿ ಎಂದು ತೋರಿಸುತಿತ್ತು. ಆರೋಪಿ ಮೊಬೈಲ್ ಲೊಕೇಷನ್ ಪರಿಶೀಲನೆ ಮಾಡಿದ್ದಾಗ ಅದು ಮಹಾರಾಷ್ಟ್ರದ ಶೀರೋಲ್ ಎಂದು ಖಚಿತವಾಗಿತ್ತು.

ಆದ್ದರಿಂದ ಲೊಕೇಷನ್ ಪತ್ತೆಗೆ ಮಹಾರಾಷ್ಟ್ರ ಶಿರೋಲ್ ಪೊಲೀಸರಿಗೆ ಕಳುಹಿಸಿಕೊಡಲಾಗಿತ್ತು. ಅವರು ತನಿಖೆ ನಡೆಸಿದಾಗ ಮುದ್ದೇಬಿಹಾಳ ಪೊಲೀಸರು ಆ ನಂಬರ್​ನ ಸಿಮ್​ ಕಾರ್ಡ್‌ನ್ನು ಜಪ್ತಿ ಮಾಡಿರುವುದು ಕಂಡು ಬಂದಿತ್ತು. ನಂತರ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾಗ ಮುರುಗಪ್ಪ ಎಂಬುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು.

ಬೆಳಗಾವಿ ಮೂಲದ ಮುರುಗಪ್ಪ ರಿಸರ್ವ್ ಪೊಲೀಸ್ ಕಾನ್‌ಸ್ಟೆಟೇಬಲ್ ಆಗಿದ್ದು, ಕೆಲಸದಿಂದ ವಜಾಗೊಂಡಿದ್ದ. ರಾಜ್ಯದ ವಿವಿಧ ಠಾಣೆಗಳಲ್ಲಿ ಆರೋಪಿತನ ವಿರುದ್ಧ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದ ಪ್ರಕರಣದಲ್ಲಿ ಮುದ್ದೇಬಿಹಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!