ಹಿರೇಕೇರೂರಿನಲ್ಲಿ ನಮಗೆ ಆಶೀರ್ವಾದ ಮಾಡಿ, ಶಿಕಾರಿಪುರದಲ್ಲಿ ವಿಜಯೇಂದ್ರಗೆ ಆಶೀರ್ವಾದಿಸಿ: ಬಿ.ಸಿ.ಪಾಟೀಲ್

ಹೊಸದಿಗಂತ ವರದಿ, ಹಾವೇರಿ:

ಹಿರೇಕೇರೂರು ಸರ್ವಜ್ಞನ ನಾಡು. ಶಿಕಾರಿಪುರ ಶರಣರ ನಾಡು. ಹಿರೇಕೇರೂರಿನಲ್ಲಿ ನಮಗೆ ಆಶೀರ್ವಾದ ಮಾಡಿ. ಶಿಕಾರಿಪುರದಲ್ಲಿ ವಿಜಯೇಂದ್ರ ಅವರಿಗೆ ಆಶೀರ್ವಾದ ಮಾಡುವಂತೆ ನೀವು ಸಂಬಂಧಿಕರಿಗೆ ಹೇಳಿ ಎಂದು ಹಿರೇಕೆರೂರ ಬಿಜೆಪಿ ಅಭ್ಯರ್ಥಿ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಮತಯಾಚನಾ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನನ್ನು ೪ ಬಾರಿ ಶಾಸಕನನ್ನಾಗಿ ಮಾಡಿದ್ದೀರಿ. ಕಾಂಗ್ರೆಸ್-ಜೆಡಿಎಸ್‌ಗಳ ದುರಾಡಳಿತ ನೋಡಿ. ಈ ರಾಜ್ಯ ರೈತ ನಾಯಕನ ಕೈಗೆ ಸಿಗಬೇಕು ಅಂತ ಹೇಳಿ ನಾವು ಬಿಜೆಪಿಗೆ ಬಂದೆವು. ಕಾಂಗ್ರೆಸ್ ನಮ್ಮನ್ನು ಅನರ್ಹ ಮಾಡಿತು. ಈ ಸರ್ಕಾರದಲ್ಲಿ ನಮಗೆ ಅರಣ್ಯ ಖಾತೆ ಕೊಟ್ಟಿದ್ದರು. ಆದರೆ ನಾನು ರೈತರ ಪರವಾಗಿ ಕೆಲಸ ಮಾಡಲು ಕೃಷಿ ಖಾತೆ ತಗೊಂಡೆ ಅನೇಕ ಯೋಜನೆಗಳನ್ನು ಸಹ ಜಾರಿಗೆ ತಂದ ತೃಪ್ತಿ ನನಗಿದೆ ಎಂದರು.

ರಟ್ಟೀಹಳ್ಳಿ ತಾಲೂಕನ್ನಾಗಿ ಮಾಡಲಾಗಿದೆ. ಈ ತಾಲೂಕಿನ ಎಲ್ಲಾ ಕೆರೆ ತುಂಬಿಸಿದ್ದೇವೆ ೧೮೫ ಕೋಟಿ ಹಣ ಯಡಿಯೂರಪ್ಪ ಕೊಟ್ಟರು. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಆಗಲು ಸಂಸದ ಬಿ.ವೈ,ರಾಘವೇಂದ್ರ ಅವರ ಕೊಡುಗೆ ದೊಡ್ಡದು. ೨೦೧೯ರ ಚುನಾವಣೆಯಲ್ಲಿ ನಾನು ಯಡಿಯೂರಪ್ಪಗೆ ವಿನಂತಿ ಮಾಡಿದ್ದರಿಂದ. ಯು.ಬಿ.ಬಣಕಾರ ಅವರಿಗೆ ಉಗ್ರಾಣ ನಿಗಮ ಕೊಟ್ಟಿದ್ದರು. ಅವರು ಮೂರು ವರ್ಷ ಅನಭಿಶಕ್ತ ದೊರೆಯಾಗಿ ಕೆಲಸ ಮಾಡಿದರು. ಆದರೆ ಹಿರೇಕೆರೂರು ರಟ್ಟೀಹಳ್ಳಿಯಲ್ಲಿ ಒಂದೇ ಒಂದು ಉಗ್ರಾಣ ಕೊಡಲಿಲ್ಲ ಎಂದು ದೂರಿದರು.

೨೦೧೮ ರಲ್ಲಿ ಯಡಿಯೂರಪ್ಪ ಅವರ ಗಾಳಿ ಬೀಸಿತ್ತು. ಆಗಲೂ ನಾನು ಗೆದ್ದಿದ್ದೆ. ನಂದೂ ಅಭಿವೃದ್ಧಿಯಲ್ಲಿ ಪಾಲಿದೆ ಅಂತಾರೆ ಬಣಕಾರ. ಅಲ್ರಿ ಸೋತವರದು ತ್ಯಾಗಾನೋ?, ಗೆದ್ದವರದು ತ್ಯಾಗನೋ?. ನಾನು ಬಿಜೆಪಿಗೆ ಬಂದಿದ್ದಕ್ಕೆ ಅವರು ಉಗ್ರಾಣ ನಿಗಮದ ಅದ್ಯಕ್ಷರಾದರು. ಬಣಕಾರ ಕೈ ಹಿಡಿದು ಮೇಲಿತ್ತಿದವರು ಯಡಿಯೂರಪ್ಪ ಅವರು. ಆದರೆ ಶಿಕಾರಿಪುರದಲ್ಲಿ ಕಾಂಗ್ರೆಸ್ ಗೆಲ್ಲಿಸಿ ಅಂತ ಹೇಳ್ತಾರೆ ಅಂದರೆ ಮನಸ್ಸಲ್ಲಿ ಎಷ್ಟು ವಿಷ ಇರಬಹುದು? ಬಣಕಾರ್ ವಿರುದ್ಧ ಬಿ.ಸಿ.ಪಾಟೀಲ ಕಿಡಿಕಾರಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಮಾತನಾಡಿದರು. ಪಾಲಾಕ್ಷಗೌಡ ಪಾಟೀಲ, ಎಸ್.ಎಸ್.ಪಾಟೀಲ, ಲಿಂಗರಾಜ ಚಪ್ಪರದಳ್ಳಿ, ಎನ್.ಎಂ.ಈಟೇರ್, ಅಖೀಲೇಶ್ ಸಿಂಗ್, ಪ್ರಕಾಶಗೌಡ ಪಾಟೀಲ್, ವನಜಾ ಪಾಟೀಲ, ಸೃಷ್ಠಿ ಪಾಟೀಲ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!