ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಭಾಗವಹಿಸುವಿಕೆ ಈ ಬಾರಿ ಗಮನ ಸೆಳೆದಿದೆ. ಹಲವರು ತಮ್ಮ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿ ಮತಗಟ್ಟೆಗೆ ಆಗಮಿಸಿದರೆ, ಕೆಲ ಪ್ರಮುಖ ಚಿತ್ರತಾರೆಯರು ಮತದಾನದಿಂದ ದೂರ ಉಳಿದಿದ್ದು ಚರ್ಚೆಗೆ ಕಾರಣವಾಗಿದೆ.
ಮತದಾನಕ್ಕೆ ಗೈರಾದ ಪ್ರಮುಖ ಹೆಸರುಗಳಲ್ಲಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸೇರಿದ್ದಾರೆ. ಜೊತೆಗೆ ಐಶ್ವರ್ಯಾ ರೈ ಬಚ್ಚನ್ ಕೂಡ ಮತಗಟ್ಟೆಯಲ್ಲಿ ಕಾಣಿಸಿಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಅವರ ಕುಟುಂಬ, ನಟಿ ಮಾಧುರಿ ದೀಕ್ಷಿತ್, ಅನಿಲ್ ಕಪೂರ್, ಗೋವಿಂದ, ಅಜಯ್ ದೇವಗನ್, ಫರ್ಹಾನ್ ಅಖ್ತರ್, ಸೋನಾಕ್ಷಿ ಸಿನ್ಹಾ, ಕಾಜೋಲ್, ಕರಣ್ ಜೋಹರ್ ಹಾಗೂ ರಾಣಿ ಮುಖರ್ಜಿ ಕೂಡ ಈ ಬಾರಿ ಮತದಾನಕ್ಕೆ ಹಾಜರಾಗಿರಲಿಲ್ಲ. ಇವರ ಗೈರುಹಾಜರಿಯ ನಿಖರ ಕಾರಣಗಳ ಬಗ್ಗೆ ಯಾರಿಂದಲೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದರ ನಡುವೆಯೇ, ಸಲ್ಮಾನ್ ಖಾನ್, ಆಮಿರ್ ಖಾನ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಶ್ರದ್ಧಾ ಕಪೂರ್, ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಸೈಫ್ ಅಲಿ ಖಾನ್ ಸೇರಿದಂತೆ ಹಲವರು ಮತ ಚಲಾಯಿಸುವ ಮೂಲಕ ಜನರ ಗಮನ ಸೆಳೆದರು.
ವಿಶೇಷವಾಗಿ, 91 ವರ್ಷದ ಹಿರಿಯ ಕವಿ–ಗೀತರಚನೆಕಾರ ಗುಲ್ಜಾರ್ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಸಾಯಿರಾ ಬಾನು, ಹೇಮಾ ಮಾಲಿನಿ ಮತ್ತು ಶಬಾನಾ ಅಜ್ಮಿ ಸೇರಿದಂತೆ ಹಿರಿಯ ನಟಿಯರೂ ಮತದಾನದಲ್ಲಿ ಭಾಗವಹಿಸಿದರು.
ಜನವರಿ 15ರಂದು ನಡೆದ ಮತದಾನದ ಎಣಿಕೆ ಜನವರಿ 16ರಂದು ಬೆಳಿಗ್ಗೆ ಆರಂಭವಾಗಲಿದ್ದು, ಮಧ್ಯಾಹ್ನದ ನಂತರ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ.


