ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೆ ಬಿಎಂಆರ್‌ಸಿಎಲ್ ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತಾನು ಮೂಕ ಮತ್ತು ಕಿವುಡ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ ಮಾಡುತ್ತಿದ್ದನು. ಈ ಬಗ್ಗೆ ದೂರು ಬರುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಆತನ ಮೇಲೆ ಪ್ರಕರಣ ದಾಖಲಿಸಿ 500 ರೂ. ದಂಡ ವಿಧಿಸಿದ್ದಾರೆ.
ಕೊಪ್ಪಳ ಮೂಲದ ಮಲ್ಲಿಕಾರ್ಜುನ್ (20) ಎಂಬಾತನೇ ಮೆಟ್ರೋ ರೈಲಿನ ಒಳಗಡೆ ಭಿಕ್ಷೆ ಬೇಡುತ್ತಿದ್ದ ಯುವಕ.
ಮೆಟ್ರೋ ರೈಲಿನೊಳಗೆ ಭಿಕ್ಷೆ ಬೇಡಿದ ಮೊದಲ ಪ್ರಕರಣ ಇದಾಗಿದ್ದು, ಪ್ರಯಾಣಿಕರಿಗೆ ತೊಂದರೆ ನೀಡಿದ ಹಿನ್ನೆಲೆ ಈತನ ವಿರುದ್ಧ ಕಾಯಿದೆ ಸೆಕ್ಷನ್ 59 ರಡಿ ಪ್ರಕರಣ ದಾಖಲಿಸಲಾಗಿದೆ. ಈತನನ್ನು ವಶಕ್ಕೆ ಪಡೆದ ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಈತ ಕಿವುಡ, ಮೂಗನಾಗಿರುವುದು ಧೃಡಪಟ್ಟಿದೆ.