ಟಾಟಾ ಮೋಟಾರ್ಸ್‌ ಅಂಗಸಂಸ್ಥೆಯೊಂದಿಗೆ ಬಿಎಂಟಿಸಿ ಒಪ್ಪಂದ: ಇನ್ಮುಂದೆ ಬೆಂಗಳೂರಲ್ಲಿ ಸಂಚರಿಸಲಿವೆ 921 ಎಲೆಕ್ಟ್ರಿಕ್‌ ಬಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತಿನಲ್ಲಿ ಇಂಧನ ಕೊರತೆಯ ಭೀತಿ ಹೆಚ್ಚಾಗುತ್ತಿರುವುದರಿಂದ ಪಳೆಯುಳಿಕೆ ಇಂಧನಗಳಿಗೆ ಪರ್ಯಾಯ ಮಾರ್ಗಗಳನ್ನು ಹುಡುಕಲಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಹೆಮ್ಮೆಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಾರ್ಯಪ್ರವೃತ್ತವಾಗಿದ್ದು ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಮುಂದಾಗಿದೆ. ದೇಶದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಕನಾದ ಟಾಟಾ ಮೋಟರ್ಸ್‌ ನ ಅಂಗಸಂಸ್ಥೆ ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್‌ನೊಂದಿಗೆ ನಿರ್ಣಾಯಕ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಅನ್ವಯ ನಗರದಲ್ಲಿ 921 ಎಲೆಕ್ಟ್ರಿಕ್‌ ಬಸ್‌ ಗಳು ಕಾರ್ಯ ನಿರ್ವಹಿಸಲಿವೆ.

ಒಪ್ಪಂದದ ಭಾಗವಾಗಿ, TML ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್ 12 ಮೀಟರ್ ಲೋ-ಫ್ಲೋರ್ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಿದ್ದು 12 ವರ್ಷಗಳ ಅವಧಿಗೆ ಈ ಬಸ್‌ಗಳ ನಿರ್ವಹಣೆಯ ಹೊಣೆ ಹೊತ್ತಿದೆ. ಟಾಟಾ ಸ್ಟಾರ್‌ಬಸ್ ಎಲೆಕ್ಟ್ರಿಕ್ ಸುಸ್ಥಿರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಉನ್ನತ ವಿನ್ಯಾಸ ಮತ್ತು ಅತ್ಯುತ್ತಮ ದರ್ಜೆಯ ವೈಶಿಷ್ಟ್ಯಗಳೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಾಹನವಾಗಿದೆ.

ಈ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಪ್ರತಿಕ್ರಿಯಿಸಿದ್ದು ‘ಶೂನ್ಯ ಹೊರಸೂಸುವಿಕೆ, ಪರಿಸರ ಸ್ನೇಹಿ ಬಸ್‌ಗಳ ಪ್ರವೇಶದಿಂದ ಎಲ್ಲಾ ಪಾಲುದಾರರಿಗೆ ಅನುಕೂಲವಾಗಲಿದೆ ಮತ್ತು ವಾಯುಮಾಲಿನ್ಯವನ್ನು ತಡೆಯಲು ಸಹಾಯ ಮಾಡುತ್ತದೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಸಂಸ್ಥೆಯ ಪಾಲುದಾರಿಕೆಯು ನಗರದಲ್ಲಿ ಅಡೆತಡೆಯಿಲ್ಲದ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸಲು ಸಹಾಯಕವಾಗಿದೆʼ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!