ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಎದುರಿಗೆ ಬಂದ ಬಿಎಂಟಿಸಿ ಬಸ್’ಗೆ ಸಿಲುಕಿ ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ವಿಷ್ಣುವರ್ಧನ್ ರಸ್ತೆಯ ಬಿಜಿಎಸ್ ಬಸ್ ನಿಲ್ದಾಣದ ಬಳಿ ಬುಧವಾರ ರಾತ್ರಿ ನಡೆದಿದೆ.
ಮೃತರನ್ನು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಡಿವಾಳ ನಿವಾಸಿ ಆನಂದ್ (36) ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ 8.30ರ ಸುಮಾರಿಗೆ ಡಿಪೋ ನಂ.37 ಗೆ ಸೇರಿದ ಬಿಎಂಟಿಸಿ ಬಸ್ (ಕೆಎ-57-ಎಫ್-3615) ಮಾರ್ಗ ನಂ. 375 H/5 ಶಿರ್ಕೆ ಅಪಾರ್ಟ್‌ಮೆಂಟ್‌ನಿಂದ ಜಯನಗರಕ್ಕೆ ತೆರಳುತ್ತಿತ್ತು. ಆನಂದ್ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವಾಗ ಎದುರಿಗೆ ಬಂದ ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ನಡುವೆ ಮೃತರ ಕುಟುಂಬಕ್ಕೆ ಮಧ್ಯಂತರ ಪರಿಹಾರ ನೀಡಿರುವುದಾಗಿ ಬಿಎಂಟಿಸಿ ಪ್ರಕಟಣೆ ತಿಳಿಸಿದೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.