February 28, 2026
Saturday, February 28, 2026
spot_img

ನಿಯಂತ್ರಣ ತಪ್ಪಿದ BMTC ಬಸ್: ಚಾಲಕನ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಕಮಲಾನಗರದಲ್ಲಿ ಭಾನುವಾರ ಸಂಜೆ ಬಿಎಂಟಿಸಿ ಬಸ್ ಅಟ್ಟಹಾಸ ಮೆರೆದಿದ್ದು, ದೊಡ್ಡ ಮಟ್ಟದ ಪ್ರಾಣಾಪಾಯವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಭಾನುವಾರ ಸಂಜೆ ಸುಮಾರು 6.49ರ ವೇಳೆಗೆ ಕಮಲಾನಗರದ ಡಾ. ರಾಜ್ ಕುಮಾರ್ ಸರ್ಕಲ್ ಬಳಿ ಈ ಆತಂಕಕಾರಿ ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನ ಬ್ರೇಕ್ ದಿಢೀರ್ ವಿಫಲಗೊಂಡಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಬಸ್ ರಸ್ತೆಯಲ್ಲಿದ್ದ ವಾಹನಗಳು ಮತ್ತು ಜನರ ಮೇಲೆ ನುಗ್ಗುವಂತೆ ಬಂದಿದೆ. ಈ ವೇಳೆ ರಸ್ತೆಯಲ್ಲಿದ್ದ ಯುವಕನೊಬ್ಬ ಸೆಕೆಂಡುಗಳ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ನಿಯಂತ್ರಣಕ್ಕೆ ಬಾರದ ಬಸ್ ಅಂತಿಮವಾಗಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಬಸ್ ಅಪ್ಪಳಿಸಿದ ರಭಸಕ್ಕೆ ಅಲ್ಲೇ ಇದ್ದ ಆಟೋ ಹಾಗೂ ಬೈಕ್‌ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಆಟೋ ಚಾಲಕ, ಪ್ರಯಾಣಿಕರು ಮತ್ತು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ:

ಬಸ್ ವೇಗವಾಗಿ ಬಂದಿದ್ದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಚಾಲಕನ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !