ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಗರುಡಾಚಾರ್ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. 90ರ ಹರೆಯದ ಗರುಡಾಚಾರ್ ಅವರು ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ ದಕ್ಷತೆ ಮತ್ತು ಪ್ರಾಮಾಣಿಕತೆಯ ರೂಪವಾಗಿದ್ದರು.
ಶನಿವಾರ ಸಂಜೆ 4 ಗಂಟೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿ.ಎನ್ ಗರುಡಾಚಾರ್ 1963ರಲ್ಲಿ ಬೆಂಗಳೂರು ನಗರದ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದರು, ಆ ಸಮಯದಲ್ಲಿ ಬೆಂಗಳೂರಿನ ಕಾರ್ಪೊರೇಷನ್ ವೃತ್ತದಲ್ಲಿ ಬೆಂಗಳೂರು ನಗರದ ಮೊದಲ ಟ್ರಾಫಿಕ್ ಸಿಗ್ನಲ್ ಪ್ರಾರಂಭಿಸಿದ್ದರು. ಈ ಐತಿಹಾಸಿಕ ಘಟನೆಯ ಸವಿನೆನಪಿಗಾಗಿ, ಈ ಘಟನೆಯನ್ನು ಹೆಸರಿಸುವ ಕಲ್ಲನ್ನು 2021ರ ಮಾರ್ಚ್ನಲ್ಲಿ ಖುದ್ದು ಗರುಡಾಚಾರ್ ಅವರೇ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್, ಬೆಂಗಳೂರು ನಗರದ ಸಂಚಾರ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಜತೆಗೂಡಿ ಉದ್ಘಾಟಿಸಿದ್ದರು. ಅಂದು ಗರುಡಾಚಾರ್ ಅವರನ್ನೂ ಪೊಲೀಸ್ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಗಿತ್ತು.