ಹೊಸದಿಗಂತ ಡಿಜಿಟಲ್ ಡೆಸ್ಕ್ :
ಉತ್ತರ ಆಫ್ರಿಕಾದಿಂದ ಮೆಡಿಟರೇನಿಯನ್ ದಾಟುವ ವಲಸಿಗರ ದೋಣಿಗಳ ಸಂಖ್ಯೆ ಹೆಚ್ಚಳವಾಗಿದೆ. ಈ ನಡುವೆ 400 ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದ್ದ ದೋಣಿಯೊಂದು ಮಾಲ್ಟಾ ಮತ್ತು ಗ್ರೀಸ್ ನಡುವೆ ದಾರಿ ತಪ್ಪಿರುವುದರ ಬಗ್ಗೆ ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಸ್ಥಳಾಂತರಗೊಂಡ ಜನರನ್ನು ಸಮುದ್ರ ಮಾರ್ಗವಾಗಿ ಸಾಗಿಸುವ ಕಾರ್ಯ ಉತ್ತರ ಆಫ್ರಿಕಾದಲ್ಲಿ ಭರದಿಂದ ಸಾಗಿದೆ. ಈ ನಡುವೆ ಪದೇ ಪದೇ ಕಹಿ ಘಟನೆಗಳು ಸಂಭವಿಸುತ್ತಿವೆ. ಈಗ ಲಿಬಿಯಾದ ಟೊಬ್ರೂಕ್‌ನಿಂದ ಗ್ರೀಸ್ಗೆ 400 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ದಾರಿ ತಪ್ಪಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.
ದೋಣಿಯಲ್ಲಿ ಸಾಗುತ್ತಿದ್ದ ಕೆಲವರು ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹಡಗಿನ ಇಂಧನ ಮುಗಿದಿದೆ ಮತ್ತು ಅದರ ಕೆಳಗಿನ ಡೆಕ್ ನೀರಿನಿಂದ ತುಂಬಿದೆ. ಅಷ್ಟೇ ಅಲ್ಲದೆ ದೋಣಿಯ ಕ್ಯಾಪ್ಟನ್ ನಾಪತ್ತೆಯಾಗಿದ್ದಾರೆ. ಬೋಟ್ ಅನ್ನು ಓಡಿಸಲು ಇಲ್ಲಿ ಯಾರೂ ಇಲ್ಲ ಎಂದು ಹಡುಗಿನಲ್ಲಿ ಪ್ರಯಾಣಿಸುತ್ತಿದ್ದ ಜನರು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಡಗಿನಲ್ಲಿರುವ ಜನರು ಭಯಭೀತರಾಗಿದ್ದಾರೆ ಮತ್ತು ಅನೇಕರಿಗೆ ವೈದ್ಯಕೀಯ ಆರೈಕೆಯ ಅಗತ್ಯವಿದೆ. ದೋಣಿಯಲ್ಲಿ ಮಗು, ಗರ್ಭಿಣಿ ಮಹಿಳೆ ಮತ್ತು ವಿಶೇಷ ಚೇತನರು ಸೇರಿದಂತೆ 400 ಜನರು ಪ್ರಯಾಣಿಸುತ್ತಿದ್ದೇವೆ ಎಂದು ಫೋನ್ ಮೂಲಕ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದ್ದು, ಆದಷ್ಟು ಬೇಗ ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ರಕ್ಷಿಸುತ್ತೇವೆ ಎಂದು ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.