ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಅಪಾರ್ಟ್ಮೆಂಟ್ ಒಂದರಲ್ಲಿ ಕುತ್ತಿಗೆ ಸೀಳಿದ ಗಗನಸಖಿಯೊಬ್ಬರ ಶವ ಪತ್ತೆಯಾಗಿದೆ.
ಮೃತರನ್ನು ರೂಪಲ್ ಓಗ್ರೆ ಎಂದು ಗುರುತಿಸಲಾಗಿದೆ. ಛತ್ತೀಸ್ಗಢ ಮೂಲದವರಾದ ಈಕೆ, ಏರ್ ಇಂಡಿಯಾದಲ್ಲಿ ತರಬೇತಿಗಾಗಿ ಏಪ್ರಿಲ್ನಲ್ಲಿ ಮುಂಬೈಗೆ ಬಂದಿದ್ದರು. ಉಪನಗರ ಅಂಧೇರಿಯ ಮರೋಲ್ ಪ್ರದೇಶದ ಕ್ರಿಶನ್ಲಾಲ್ ಮರ್ವಾಹ್ ಮಾರ್ಗದಲ್ಲಿರುವ ಎನ್ಜಿ ಕಾಂಪ್ಲೆಕ್ಸ್ನಲ್ಲಿರುವ ಫ್ಲಾಟ್ನಲ್ಲಿ ಭಾನುವಾರ ತಡರಾತ್ರಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ .
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಕುಟುಂಬ ಸದಸ್ಯರ ಫೋನ್ ಕರೆಯನ್ನು ಆಕೆ ಸ್ವೀಕರಿಸದಿದ್ದಾಗ ಮುಂಬೈನಲ್ಲಿರುವ ಆಕೆಯ ಸ್ನೇಹಿತರಿಗೆ ಫೋನ್ ಮಾಡಿದ್ದು, ಅವರು ಫ್ಲಾಟ್ ಗೆ ಬಂದು ನೋಡಿದಾಗ ಒಳಗಿನಿಂದ ಬೀಗ ಹಾಕಿರುವುದನ್ನು ಕಂಡುಬಂದಿದೆ. ನಂತರ, ಅವರು ಪೊವೈ ಪೊಲೀಸರನ್ನು ಸಂಪರ್ಕಿಸಿದ್ದು, ಅವರ ಸಹಾಯದಿಂದ ನಕಲಿ ಕೀ ಬಳಸಿ ಫ್ಲಾಟ್ ಬಾಗಿಲು ತೆರೆದಾಗ ಮಹಿಳೆ ಕುತ್ತಿಗೆ ಸೀಳಿ ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ಆಕೆಯನ್ನು ರಾಜವಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ದಾಖಲಿಸುವ ಮುನ್ನವೇ ಆಕೆ ಮೃತಪಟ್ಟಿದ್ದಳು ಎಂದು ಅವರು ತಿಳಿಸಿದ್ದಾರೆ.