ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೊಲೆರೋ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಂಡುಪಾಳ್ಯ ಗೇಟ್ ಬಳಿ ಸಂಭವಿಸಿದೆ.
ಬೊಲೆರೋ ವಾಹನದಲ್ಲಿ ಮದನಪಲ್ಲಿ ಕಡೆಯಿಂದ ಆಂಧ್ರ ಪ್ರದೇಶದ ಕದರಿ ಮೂಲದವರು ವಿಜಯಪುರ ಕಡೆಗೆ ಹೋಗುತ್ತಿದ್ದು, ದ್ವಿಚಕ್ರ ವಾಹನದಲ್ಲಿ ಆಯಾಜ್(33ವರ್ಷ) ಹಾಗೂ ತನ್ನ ಹೆಂಡತಿ ತರನ್ನುಂ (22ವರ್ಷ) ಇಬ್ಬರು ಬೇತಮಂಗಲ ಕಡೆ ಪ್ರಯಾಣ ಮಾಡುತ್ತಿದ್ದರು.
ಬೊಲೆರೋ ವಾಹನ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಹೆಂಡತಿ ತರನ್ನುಂ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇನ್ನೂ ಗಂಡ ಆಯಾಜ್‌ಗೆ ಗಂಭೀರ ಗಾಯಗಳಾಗಿದ್ದು ಬೊಲೆರೋ ವಾಹನದಲ್ಲಿ ಇದ್ದ ಕದರಿ ಮೂಲದ ಅದಲ್ಲಪ್ಪ ಬೀದಿಯ ಫಕ್ರುದ್ದೀನ್, ಆಜದ್, ಜಬೀನ, ಹಮೀದ್, ಶೋಯಿಬ್, ಸಲೀಮಾ, ಶಕೀರಾ, ಶಬ್ನಂಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.