ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಹೊಸ ಸಿನಿಮಾದ ‘ಮಹಾಕಾಲ್ ಚಲೋ’ ಹಾಡನ್ನು ಬಿಡುಗಡೆ ಮಾಡಿದರು. ಇದೀಗ ಈ ಸಾಂಗ್ ನೋಡಿದ ಕೆಲವರು ತಕರಾರು ತೆಗೆದಿದ್ದಾರೆ .
ಇದಕ್ಕೆ ಇದೀಗ ಅಕ್ಷಯ್ ಕುಮಾರ್ ಸ್ಪಷ್ಟನೆ ನೀಡಿದ್ದು, ಶಿವಲಿಂಗವನ್ನು ತಬ್ಬಿಕೊಂಡಿದ್ದರಲ್ಲಿ ತಮ್ಮ ತಪ್ಪು ಏನೂ ಇಲ್ಲ ಎಂದು ಅವರು ಹೇಳಿದ್ದಾರೆ.
‘ಮಹಾಕಾಲ್ ಚಲೋ’ ಹಾಡಿನಲ್ಲಿ ಅಕ್ಷಯ್ ಕುಮಾರ್ ಅವರು ಶಿವಲಿಂಗವನ್ನು ತಬ್ಬಿಕೊಂಡಿದ್ದಾರೆ. ಈ ಹಾಡು ನೋಡಿದ ಅರ್ಚಕರ ಒಕ್ಕೂಟವು ಆಕ್ಷೇಪ ವ್ಯಕ್ತಪಡಿಸಿದೆ. ಹಾಡು ಚೆನ್ನಾಗಿದೆ, ಆದರೆ ಅಕ್ಷಯ್ ಕುಮಾರ್ ಅವರು ಶಿವಲಿಂಗವನ್ನು ತಬ್ಬಿಕೊಂಡಿದ್ದು ಸರಿಯಲ್ಲ ಎಂದು ಹೇಳಿದ್ದರು. ಜೊತೆಗೆ ಈ ಹಾಡಿನಲ್ಲಿ ಭಸ್ಮವನ್ನು ಬಳಸಿದ ವಿಧಾನ ಕೂಡ ತಪ್ಪಾಗಿದೆ ಎಂದು ಹೇಳಲಾಯಿತು.
ಇತ್ತೀಚೆಗೆ ಅವರು ‘ಕಣ್ಣಪ್ಪ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದರು. ಈ ಚಿತ್ರದಲ್ಲಿ ಕೂಡ ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡಿದ್ದಾರೆ. ‘ಬಾಲ್ಯದಿಂದಲೂ ದೇವರೇ ನಮ್ಮ ತಂದೆ-ತಾಯಿ ಎಂಬುದನ್ನು ಪೋಷಕರು ನಮಗೆ ಹೇಳಿಕೊಟ್ಟಿದ್ದಾರೆ. ನಿಮ್ಮ ಪೋಷಕರನ್ನು ನೀವು ತಬ್ಬಿಕೊಂಡರೆ ಅದರಲ್ಲಿ ತಪ್ಪೇನಿದೆ’ ಎಂದು ಅಕ್ಷಯ್ ಕುಮಾರ್ ಅವರು ಮರುಪ್ರಶ್ನೆ ಹಾಕಿದ್ದಾರೆ.
ನನಗೆ ದೇವರಿಂದ ಶಕ್ತಿ ಬರುತ್ತದೆ. ಯಾರಾದರೂ ನನ್ನ ಭಕ್ತಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ ಅದರಲ್ಲಿ ನನ್ನ ತಪ್ಪು ಏನೂ ಇಲ್ಲ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.