ಬುಲೆಟ್ ಪ್ರೂಫ್ ಕಾರು ಖರೀದಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್;
 
ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ ಹೆಚ್ಚಾಗಿದೆ. ಲಾರೆನ್ಸ್ ಬಿಷ್ಣೋಯಿ ಮತ್ತು ಅವನ ಸಹಚರರಲು ಸಲ್ಮಾನ್ ಖಾನ್ ಅನ್ನು ಹೇಗಾದರೂ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್​ರ ಆಪ್ತ ಬಾಬಾ ಸಿದ್ಧಿಖಿ ಅವರನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಕೊಂದಿದೆ. ಇದರ ಬೆನ್ನಲ್ಲೆ ಸಲ್ಮಾನ್ ಖಾನ್ ಈಗ ಇನ್ನಷ್ಟು ಜಾಗೃತರಾಗಿದ್ದಾರೆ. ಅವರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ಸಹ ಹೆಚ್ಚಿಸಲಾಗಿದೆ.

ಸಲ್ಮಾನ್ ಖಾನ್​ಗೆ ಈಗಾಗಲೇ ಖಾಸಗಿ ಭದ್ರತಾ ಸಂಸ್ಥೆಯೊಂದು ಭದ್ರತೆ ನೀಡುತ್ತಿದೆ. ಸಲ್ಮಾನ್ ಖಾನ್​ರ ಖಾಸಗಿ ಅಂಗರಕ್ಷಕ ಶೇರಾ ಸಹ ಜೊತೆಗೇ ಇರುತ್ತಾರೆ. ಇದೆಲ್ಲದರ ಜೊತೆಗೆ ಸಲ್ಮಾನ್ ಖಾನ್ ಮುಂಬೈ ಪೊಲೀಸರಿಂದ ಪರವಾನಗಿ ಪಡೆದು ಆಟೊಮ್ಯಾಟಿಕ್ ಬಂದೂಕೊಂದನ್ನು ಸಹ ಪಡೆದುಕೊಂಡಿದ್ದಾರೆ. ಇವುಗಳ ಜೊತೆಗೆ ಸಲ್ಮಾನ್ ಖಾನ್ ಬುಲೆಟ್ ಕಾರೊಂದನ್ನು ಇತ್ತೀಚೆಗೆ ಖರೀದಿ ಮಾಡಿದ್ದಾರೆ.

ಸಲ್ಮಾನ್ ಖಾನ್ ಸಾಮಾನ್ಯವಾಗಿ ಮುಂಬೈನಲ್ಲಿ ಓಡಾಡಲು ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರನ್ನು ಹೆಚ್ಚಾಗಿ ಬಳಸುತ್ತಾರೆ. ಈ ಕಾರಿಗೆ ವಿಶೇಷ ಮಾಡಿಫಿಕೇಶನ್ ಮಾಡಿಸಿ ಇದನ್ನು ಬುಲೆಟ್ ಪ್ರೂಫ್ ಕಾರನ್ನಾಗಿ ಬದಲಾವಣೆ ಮಾಡಿಸಿದ್ದರು.

ಆದರೆ ಇತ್ತೀಚೆಗೆ ಬಾಬಾ ಸಿದ್ಧಿಕಿ ನಿಧನದ ಬಳಿಕ ಸಲ್ಮಾನ್ ಖಾನ್ ಹೊಸ ಬುಲೆಟ್ ಪ್ರೂಫ್ ಕಾರನ್ನೇ ಖರೀದಿ ಮಾಡಿದ್ದಾರೆ ಎಂದು ಬಾಲಿವುಡ್​ನ ಮ್ಯಾಗಜಿನ್ ಪಿಂಕ್​ವಿಲ್ಲಾ ವರದಿ ಮಾಡಿದೆ. ಈ ಬುಲೆಟ್ ಪ್ರೂಫ್ ಕಾರಿಗೆ 2 ಕೋಟಿ ರೂಪಾಯಿ ಹಣ ವೆಚ್ಚ ಮಾಡಿದ್ದಾರಂತೆ ಸಲ್ಮಾನ್ ಖಾನ್.

ನಿಸ್ಸಾನ್ ಸಂಸ್ಥೆಯ ಎಸ್​ಯುವಿ ಕಾರೊಂದನ್ನು ವಿದೇಶದಿಂದ ಆಮದು ಮಾಡಿಸಿಕೊಂಡಿದ್ದಾರೆ ಸಲ್ಮಾನ್ ಖಾನ್. ವಿಶೇಷವಾಗಿ ಆರ್ಡರ್ ನೀಡಿ ಈ ಕಾರಿಗೆ ಸೆಕ್ಯುರಿಟಿ ಫೀಚರ್ಸ್​ಗಳನ್ನು ಹಾಕಿಸಲಾಗಿದೆಯಂತೆ. ಎಕೆ 47 ಬಂದೂಕಿನಿಂದ ಬರುವ ಗುಂಡುಗಳನ್ನು ಸಹ ತಡೆದು ನಿಲ್ಲಿಸುವ ಅತ್ಯಂತ ಶಕ್ತಿಶಾಲಿ ಗಾಜುಗಳು ಇದಕ್ಕೆ ಅಳವಡಿಸಲಾಗಿರುವ ಜೊತೆಗೆ ಕಾರಿನ ಒಟ್ಟಾರೆ ಬಾಡಿ ಸಹ ಗುಂಡು ನಿರೋಧಕತೆ ಹೊಂದಿದೆ ಎನ್ನಲಾಗುತ್ತಿದೆ. ಇದು ಗುಂಡು ನಿರೋಧಕ ಆಗಿರುವ ಜೊತೆಗೆ ಬಾಂಬ್ ಅಲರ್ಟ್​ ತಂತ್ರಜ್ಞಾನವೂ ಇದರಲ್ಲಿದೆ. ಲ್ಯಾಂಡ್ ಮೈನ್​ಗಳನ್ನು ಸಹ ಇದು ಗುರುತಿಸಲಿದೆ ಅಲ್ಲದೆ ಒಂದು ಹಂತದ ವರೆಗೆ ಬಾಂಬ್ ದಾಳಿಯನ್ನು ಸಹ ಇದು ತಡೆದುಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!