ಹೊಸದಿಗಂತ ಡಿಜಿಟಲ್ ಡೆಸ್ಕ್;
ಭಾರತದ ಸ್ಟಾರ್ಟಪ್ ಲೋಕಕ್ಕೆ ಮಿನುಗುತಾರೆಯಂತಾಗಿದ್ದ ಬೈಜುಸ್ ಸಂಸ್ಥೆ ಇಂದು ದಿವಾಳಿತನವನ್ನು ಎದುರಿಸುತ್ತಿದೆ. ಸಾಲು ಸಾಲು ವಿವಾದ, ಸಂಕಷ್ಟಗಳಿಗೆ ಸಿಲುಕಿ ಒದ್ದಾಡುತ್ತಿದೆ. ಕೋರ್ಟ್ ಕಟಕಟೆಯಲ್ಲಿ ವಿಚಾರಣೆಗಳು ನಡೆಯುತ್ತಿವೆ. ಹೂಡಿಕೆದಾರರು ತಮ್ಮ ಹಣ ಮರಳಿ ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಇದೇ ವೇಳೆ ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ತಮ್ಮ ಶಿಕ್ಷಣ-ತಂತ್ರಜ್ಞಾನ ಕಂಪನಿ ಬೈಜೂಸ್ ನ ಬೆಳವಣಿಗೆಯ ಸಾಮರ್ಥ್ಯವನ್ನು ನಾನು ಅತಿಯಾಗಿ ಅಂದಾಜು ಮಾಡಿದ್ದೆ. ಆದರೆ ಅದು ಈಗ “ಶೂನ್ಯ” ಮೌಲ್ಯದಲ್ಲಿದ್ದು ದಿವಾಳಿತನವನ್ನು ಎದುರಿಸುತ್ತಿದೆ. ಆದರೂ ಅದನ್ನು ಉಳಿಸುವ ಭರವಸೆಯನ್ನು ಹೊಂದಿದ್ದೇನೆ ಎಂದು ರವೀಂದ್ರನ್ ಹೇಳಿದ್ದಾರೆ.
ಗುರುವಾರ ತಡರಾತ್ರಿ ದುಬೈನಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುದ್ದಿಗಾರರೊಂದಿಗೆ ಸಂವಾದದಲ್ಲಿ ಮಾತನಾಡಿದ ರವೀಂದ್ರನ್, ಬೈಜೂಸ್ನಿಂದ ಯಾವ ವಂಚನೆ ನಡೆದಿಲ್ಲ. ಒಂದು ವೇಳೆ ವಂಚನೆ ಆಗಿದ್ದಿದ್ದರೆ ಸಂಸ್ಥಾಪಕರು ಹಣ ಲಪಟಾಯಿಸುತ್ತಿದ್ದರು. ನಾವು ನಮ್ಮ ಹಣವನ್ನು ಕಂಪನಿಗೆ ವಾಪಸ್ ಹಾಕಿದ್ದೇವೆ. 2022ರಿಂದ ಬೈಜುಸ್ ಸಂಸ್ಥೆಗೆ ಹಣ ತುಂಬುತ್ತಾ ಬರುತ್ತಿರುವುದು ತಾವು (ಮಾಲೀಕರು) ಮಾತ್ರವೇ’ ಎಂದು ತಿಳಿಸಿದ್ದಾರೆ.
ಕಂಪನಿಯ ಮೌಲ್ಯ ಶೂನ್ಯಕ್ಕೆ ಇಳಿದಿದೆ. ನೀವು ಯಾವ ಮೌಲ್ಯಮಾಪನದ ಬಗ್ಗೆ ಮಾತನಾಡುತ್ತಿದ್ದೀರೋ ನಮಗೆ ತಿಳಿದಿಲ್ಲ. ಸಂಸ್ಥೆ ಈಗ ಶೂನ್ಯವಾಗಿದೆ. ನಾವು ಸಂಭಾವ್ಯ ಬೆಳವಣಿಗೆಯನ್ನು ಅತಿಯಾಗಿ ಅಂದಾಜು ಮಾಡಿದ್ದೆವು. ಏಕಕಾಲಕ್ಕೆ ಬಹಳಷ್ಟು ಮಾರುಕಟ್ಟೆಗಳನ್ನು ಪ್ರವೇಶಿಸುವ ನಿರ್ಧಾರ ಹಿನ್ನಡೆ ತಂದಿದೆ. ಇದು ಉತ್ತಮ ನಿರ್ಧಾರವೇ ಆದರೂ ಸ್ವಲ್ಪ ಹೆಚ್ಚು ಅಥವಾ ತುಂಬಾ ಬೇಗದ ಕ್ರಮ ಎಂದೆನಿಸುತ್ತಿದೆ ಎಂದು ಹೇಳಿದರು.
ಬೈಜುಸ್ ಸಂಸ್ಥೆ ಕೋವಿಡ್ ಸಂದರ್ಭದಲ್ಲಿ ದಿಢೀರ್ ಆಗಿ ಪ್ರಜ್ವಲಿಸಿತು. ಆ ಸಂದರ್ಭದಲ್ಲಿ ಅದರ ವ್ಯಾಲ್ಯುಯೇಶನ್ 22 ಬಿಲಿಯನ್ ಡಾಲರ್ ಮಟ್ಟಕ್ಕೆ ಹೋಗಿತ್ತು. ಅಂದರೆ, 1.8 ಲಕ್ಷ ಕೋಟಿ ರೂ ಮೌಲ್ಯದ ಕಂಪನಿ ಎನಿಸಿತ್ತು. ಆದರೆ, ಒಂದೊಂದೇ ವಿವಾದಗಳು ಮೆತ್ತಿಕೊಂಡು ಬೈಜುಸ್ ಸಂಕಷ್ಟಕ್ಕೆ ಸಿಲುಕಿತು. ಇವತ್ತು ಆ ಕಂಪನಿ ಮೌಲ್ಯ ಸೊನ್ನೆಗೆ ಬಂದಿದೆ.