September 27, 2026
Sunday, September 27, 2026
spot_img

ಫ್ಲೈಟ್ ಟೇಕ್‌ಆಫ್‌ಗೂ ಮುನ್ನ ಬಾಂಬ್ ಸಂದೇಶ: ಲಕ್ನೋದಲ್ಲಿ ನಡುಕ ಹುಟ್ಟಿಸಿದ ಅನಾಮಧೇಯ ಚೀಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಆತಂಕ ಸೃಷ್ಟಿಯಾಗಿದ್ದು, ದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ.

ರನ್‌ವೇನಲ್ಲೇ ನಿಂತ ವಿಮಾನ!

ಇಂಡಿಗೋ ವಿಮಾನವು ಪ್ರಯಾಣಿಕರೊಂದಿಗೆ ದೆಹಲಿಗೆ ಹಾರಲು ರನ್‌ವೇ ಕಡೆಗೆ ಚಲಿಸುತ್ತಿದ್ದಾಗ, ಏರ್‌ಲೈನ್ಸ್ ಕಂಟ್ರೋಲ್ ರೂಮ್‌ಗೆ ಅನಾಮಧೇಯ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳು ವಿಮಾನದ ಹಾರಾಟವನ್ನು ತುರ್ತಾಗಿ ಸ್ಥಗಿತಗೊಳಿಸಿದರು.

ಐಸೊಲೇಶನ್ ಬೇಗೆ ಶಿಫ್ಟ್, ಪ್ರಯಾಣಿಕರು ಸುರಕ್ಷಿತ:

ಬಾಂಬ್ ಬೆದರಿಕೆ ಚೀಟಿ ಸಿಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ತಕ್ಷಣವೇ ಸುರಕ್ಷಿತ ‘ಐಸೊಲೇಶನ್ ಬೇ’ಗೆ ಕೊಂಡೊಯ್ಯಲಾಯಿತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ತುರ್ತು ನಿರ್ಗಮನ ದ್ವಾರಗಳ ಮೂಲಕ ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು.

ತೀವ್ರ ತಪಾಸಣೆ, ಹರಡಿದ ಆತಂಕ:

ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳವು ಶ್ವಾನದಳದೊಂದಿಗೆ ವಿಮಾನದ ಒಳಭಾಗ, ಇಂಜಿನ್ ಹಾಗೂ ಪ್ರಯಾಣಿಕರ ಲಗೇಜ್‌ಗಳನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಸುದೀರ್ಘ ಪರಿಶೀಲನೆಯ ನಂತರ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಇದರಿಂದಾಗಿ ಇದು ಹುಸಿ ಬಾಂಬ್ ಕರೆ ಎಂಬುದು ಸ್ಪಷ್ಟವಾಗಿದ್ದು, ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಸಂಪೂರ್ಣ ಮರು-ಪರಿಶೀಲನೆಯಿಂದಾಗಿ ದೆಹಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಯಿತು. ಭದ್ರತಾ ಸಂಸ್ಥೆಗಳು ತನಿಖೆ ಮುಂದುವರಿಸಿವೆ.

Must Read