November 17, 2026
Tuesday, November 17, 2026
spot_img

ಕುಲ್ಗಾಮ್ ದಾಳಿಯ ರಹಸ್ಯ ಬಯಲು: ದಾಳಿಗೂ ಮುನ್ನ ಲಷ್ಕರ್ ಉಗ್ರರು ಹೊಂಚು ಹಾಕುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಳೆದ ವಾರ CRPF ಚೆಕ್‌ಪೋಸ್ಟ್ ಮೇಲೆ ನಡೆದ ಉಗ್ರರ ದಾಳಿಯ ಸಂಪೂರ್ಣ ಸಂಚು ಈಗ ಬಯಲಾಗಿದೆ. ದಾಳಿಗೂ ಒಂದು ದಿನ ಮುನ್ನ ಲಷ್ಕರ್-ಎ-ತೊಯ್ಬಾ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಜಮ್ಮು-ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಎನ್‌ಕೌಂಟರ್‌ನಲ್ಲಿ ಸಹಚರ ಹತ, ಕಮಾಂಡರ್‌ಗಾಗಿ ತೀವ್ರ ಶೋಧ

ನಿನ್ನೆ (ಸೋಮವಾರ) ಲಾರೂ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಉಗ್ರ ಉಮರ್ ದಾರ್ ಹತನಾಗಿದ್ದಾನೆ. ಆದರೆ, ಗುಂಡಿನ ಚಕಮಕಿಯ ನಡುವೆ ಭದ್ರತಾ ಪಡೆಗಳ ಕಣ್ತಪ್ಪಿಸಿ ಪರಾರಿಯಾಗಿರುವ ಲಷ್ಕರ್ ಕಮಾಂಡರ್ ಲತೀಫ್ ಭಟ್‌ನನ್ನು ಹಿಡಿಯಲು ಸೇನೆ, ಸಿಆರ್‌ಪಿಎಫ್ ಮತ್ತು ಪೊಲೀಸರ ಜಂಟಿ ತಂಡಗಳು ಹಲವು ಗ್ರಾಮಗಳು ಹಾಗೂ ಸೇಬಿನ ತೋಟಗಳನ್ನು ಸುತ್ತುವರಿದು ಬೃಹತ್ ಶೋಧ ಕಾರ್ಯಾಚರಣೆ ಮುಂದುವರಿಸಿವೆ.

ಶಾಲಾ ಮಕ್ಕಳನ್ನು ರಕ್ಷಿಸಿ ನಡೆದ ಕಾರ್ಯಾಚರಣೆ

ಕುಲ್ಗಾಮ್‌ನಲ್ಲಿ ಇಬ್ಬರು ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ ಮತ್ತು ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ ಶೋಧ ಆರಂಭಿಸಿತ್ತು. ಭದ್ರತಾ ಪಡೆಗಳು ಹತ್ತಿರ ಬರುತ್ತಿರುವುದನ್ನು ಕಂಡ ಉಗ್ರರು ಸೇಬಿನ ತೋಟದ ಪಕ್ಕದಲ್ಲಿದ್ದ ಎರಡು ಶಾಲೆಗಳತ್ತ ಓಡಿದ್ದರು. ತಕ್ಷಣವೇ ಎಚ್ಚೆತ್ತ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದು, ಶಾಲಾ ಕಟ್ಟಡಗಳು ಮತ್ತು ತೋಟದಲ್ಲಿದ್ದ ಎಲ್ಲಾ ಮಕ್ಕಳು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಕಳುಹಿಸಿದ ನಂತರವೇ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿವೆ.

ಇದನ್ನೂ ಓದಿ:

ನಾಪತ್ತೆ ಪ್ರಕರಣದಿಂದ ಬಯಲಾಯ್ತು ಉಗ್ರರ ನಂಟು

ಈ ಎನ್‌ಕೌಂಟರ್‌ಗೂ ಮುನ್ನ ಉಮರ್ ದಾರ್ ನಾಪತ್ತೆಯಾಗಿದ್ದಾನೆ ಎಂದು ಭಾವಿಸಲಾಗಿತ್ತು. ನವೆಂಬರ್ 11ರಂದು ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆದ ದಿನವೇ ಆತ ಮನೆಗೆ ಮರಳದ ಕಾರಣ, ಅರ್ರೆಹ್ ಗ್ರಾಮದ ಆತನ ಕುಟುಂಬಸ್ಥರು ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಆದರೆ, ಜಿಲ್ಲೆಯ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ತನಿಖಾಧಿಕಾರಿಗಳು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ನವೆಂಬರ್ 10ರಂದು ಮಿರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಮ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಲತೀಫ್ ಭಟ್ ಮತ್ತು ಉಮರ್ ದಾರ್ ಸುತ್ತಾಡಿ ದಾಳಿಗೆ ಸಂಚು ರೂಪಿಸಿದ್ದರು. ಮರುದಿನ ಅಂದರೆ ನವೆಂಬರ್ 11ರಂದು ಅಖ್ರಾನ್ ಬಳಿಯ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು. ದಾಳಿ ಮಾಡಿ ಇಬ್ಬರೂ ಒಟ್ಟಿಗೆ ಓಡಿಹೋಗುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

6 ತಿಂಗಳಿನಿಂದ ಉಗ್ರನಿಗೆ ಆಶ್ರಯ ನೀಡಿದ್ದ ಉಮರ್

ಈ ಹಿಂದೆ ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಉಮರ್ ದಾರ್, ಕಳೆದ 5-6 ತಿಂಗಳಿನಿಂದ ಲಷ್ಕರ್ ಕಮಾಂಡರ್ ಲತೀಫ್ ಭಟ್‌ಗೆ ಆಶ್ರಯ ಮತ್ತು ಎಲ್ಲಾ ರೀತಿಯ ನೆರವು ನೀಡುತ್ತಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ. ನವೆಂಬರ್ 11ರ ದಾಳಿಯ ಬಳಿಕ ಮನೆಗೆ ವಾಪಸಾಗದೆ ಆತ ಅಧಿಕೃತವಾಗಿ ‘ಟಿಆರ್‌ಎಫ್’ ಉಗ್ರ ಸಂಘಟನೆಗೆ ಸೇರಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Must Read

Skip to toolbar