ವಿಮಾನಗಳಿಗೆ ಬಾಂಬ್‌ ಬೆದರಿಕೆ: ಗುಪ್ತಚರ ಇಲಾಖೆಯಿಂದ ಐಪಿ ಅಡ್ರೆಸ್‌ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಭಾರತ ಹಾಗೂ ವಿದೇಶಿ ವಿಮಾನಗಳು ಸೇರಿದಂತೆ 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ ಬರುತ್ತಿದ್ದು, ಇದೀಗ ಇದರ ಐಪಿ ವಿಳಾಸವನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ.

ಬಾಂಬ್‌ ಬೆದರಿಕೆ ಬಂದಿದ್ದ ಸೋಷಿಯಲ್‌ ಮೀಡಿಯಾ ಐಪಿ ವಿಳಾಸಗಳು ಲಂಡನ್‌ ಮತ್ತು ಜರ್ಮನಿಯಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.

ಅಕ್ಟೋಬರ್‌ 14ರಿಂದ 17ರ ವರೆಗೆ ಸುಮಾರು 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್‌ ಬೆದರಿಕೆ ಬಂದಿರುವ ಪ್ರಕರಣಗಳು ವರದಿಯಾಗಿವೆ. ಭಾರತ ಸೇರಿದಂತೆ ಅನೇಕ ವಿದೇಶಿ ವಿಮಾನಗಳಿಗೂಬೆದರಿಕೆ ಬಂದಿವೆ. ಭದ್ರತಾ ಪಡೆಗಳು ತಪಾಸಣೆ ನಡೆಸಿದ ನಂತರ ಅವು ಹುಸಿ ಬಾಂಬ್‌ ಬೆದರಿಕೆ ಎಂಬುದು ಗೊತ್ತಾಗಿದೆ.

ಈ ಬೆನ್ನಲ್ಲೇ ಕೇಂದ್ರ ಗುಪ್ತಚರ ಸಂಸ್ಥೆ ಬೆದರಿಕೆ ಮೂಲವನ್ನು ಪತ್ತೆಹಚ್ಚುವ ಕೆಲಸಕ್ಕೆ ಮುಂದಾಗಿದ್ದು, ಲಂಡನ್‌ ಮತ್ತು ಜರ್ಮನಿಯಲ್ಲಿ ವಿಳಾಸ ಪತ್ತೆಯಾಗಿದ್ದು, ಎಕ್ಸ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಪ್ತಚರ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು, ನಾವು ಪ್ರಾಥಮಿಕ ವರದಿಗಳನ್ನು ಸ್ವೀಕರಿಸಿದ್ದೇವೆ. ಈ ಮೂರು ಪ್ರತ್ಯೇಕ ಹ್ಯಾಂಡಲ್‌ಗಳಿಂದ ಪೋಸ್ಟ್‌ ಮಾಡಲಾಗಿದೆ. ಲಂಡನ್‌ನಲ್ಲಿ ಪತ್ತೆಯಾದ 2 ಐಪಿ ವಿಳಾಸ ಸಾಮಾನ್ಯ ವಿಳಾಸವಾಗಿದೆ. ಉಳಿದಂತೆ ಬಳಕೆದಾರರೊಬ್ಬರು VPN (ವರ್ಚುವಲ್ ಖಾಸಗಿ ನೆಟ್‌ವರ್ಕ್) ಬಳಸಿ ಎಕ್ಸ್‌ ಖಾತೆಯಲ್ಲಿ ಬೆದರಿಕೆ ಪೋಸ್ಟ್‌ ಮಾಡಿದ್ದಾರೆ ಎಂದು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!