Friday, February 3, 2023

Latest Posts

ಜ.21ರಿಂದ‌ ಬೂತ್ ವಿಜಯ ಸಂಕಲ್ಪ ಅಭಿಯಾನ: ರಾಬಿನ್‌ ದೇವಯ್ಯ

ಹೊಸದಿಗಂತ ವರದಿ ಮಡಿಕೇರಿ:

ಮುಂಬರುವ ವಿಧಾನಸಭಾ ಚುನಾವಣೆಯ ‘ಮಿಶನ್-150’ನ್ನು ಕಾರ್ಯಗತಗೊಳಿಸುವ ಮೂಲಕ ಪೂರ್ಣ ಬಹುಮತದ ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರುವುದಕ್ಕೆ ಪೂರಕವಾಗಿ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಜ.21 ರಿಂದ 29ರ ವರೆಗೆ ಬೂತ್ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008 ಮತ್ತು 2018ರ ಚುನಾವಣೆಯಲ್ಲಿ ಸರ್ಕಾರ ರಚನೆಗೆ ಅಗತ್ಯವಾದ ಸ್ಥಾನಗಳಿಗಿಂತ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದಿತ್ತು. ಆದರೆ, ಈ ಬಾರಿ ನಮ್ಮದೇ ಸ್ವಂತ ಶಕ್ತಿಯಿಂದ ರಾಜ್ಯದಲ್ಲಿ ಸರ್ಕಾರ ರಚನೆ ಸಾಧ್ಯವಾಗಲಿದೆ. ಪ್ರಸ್ತುತ ಚುನಾವಣೆ ಘೋಷಣೆ ಆಗದಿದ್ದರೂ, ಪಕ್ಷವನ್ನು ಬೂತ್ ಮಟ್ಟದಿಂದ ಸಶಕ್ತಗೊಳಿಸುವ ಕಾರ್ಯ ನಡೆದಿದ್ದು, ಚುನಾವಣೆ ಯಾವಾಗ ಬಂದರೂ ಎದುರಿಸಲು ಪಕ್ಷ ಸದಾ ಸಿದ್ಧವಾಗಿದೆಯೆಂದು ದೃಢವಾಗಿ ನುಡಿದರು.

ಬಿಜೆಪಿಯನ್ನು ತಳ ಮಟ್ಟದಿಂದ ಶಕ್ತಿಯುತಗೊಳಿಸುವ ಭಾಗವಾಗಿ ಇದೇ ಜ.2 ರಿಂದ 12ರವರೆಗೆ ಬೂತ್ ಅಭಿಯಾನ ಕಾರ್ಯಕ್ರಮ ನಡೆಸಲಾಗಿದ್ದು, ಇದೀಗ ‘ಬೂತ್ ವಿಜಯ ಸಂಕಲ್ಪ ಅಭಿಯಾನ’ವನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿ ನಡೆಸುವ ಮೂಲಕ, ಪಕ್ಷದ ಬಲವರ್ಧನೆಯೊಂದಿಗೆ ರಾಜಕೀಯ ಸ್ಥಿರತೆಯನ್ನು ಕಂಡುಕೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

543 ಬೂತ್‍ಗಳಲ್ಲಿ ಕಾರ್ಯಕ್ರಮ: ಬೂತ್ ವಿಜಯ ಸಂಕಲ್ಪ ಅಭಿಯಾನವನ್ನು ಕೊಡಗಿನ 543 ಕೇಂದ್ರಗಳಲ್ಲಿ ನಡೆಸುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಕರಪತ್ರದ ಮೂಲಕ ಜನರ ಮನೆ ಮನೆಗಳಿಗೆ ತಲುಪಿಸಲಾಗುತ್ತದೆಂದು ರಾಬಿನ್ ದೇವಯ್ಯ ತಿಳಿಸಿದರು.

ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಬೂತ್ ವಿಜಯ ಸಂಕಲ್ಪ ಅಭಿಯಾನವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹಾಗೂ ವೀರಾಜಪೇಟೆ ಕ್ಷೇತ್ರದ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಸಂಸದ ಪ್ರತಾಪ ಸಿಂಹ ಅವರು ಜ.21 ರಂದು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದು ಅವರು ವಿವರಿಸಿದರು.
ಪ್ರತಿ ಬೂತ್‍ನಲ್ಲಿ ಗೋಡೆ ಬರಹ: ಅಭಿಯಾನದ ಭಾಗವಾಗಿ ಜಿಲ್ಲೆಯ ಪ್ರತಿ ಬೂತ್ ವ್ಯಾಪ್ತಿಯಲ್ಲಿ ಕನಿಷ್ಟ 10 ಗೋಡೆ ಬರಹಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಈ ಗೋಡೆ ಬರಹಗಳು ಕೇಂದ್ರ ಮತ್ತು ರಾಜ್ಯದ ಜನಪರ ಯೋಜನೆಗಳಿಗೆ ಸಂಬಂಧಿಸಿದ್ದಾಗಿರುತ್ತದೆಂದು ತಿಳಿಸಿದ ಅವರು, ಆಯಾ ಬೂತ್ ಮಟ್ಟದಲ್ಲಿ ಈಗಾಗಲೆ ಪಕ್ಷದ ಸದಸ್ಯರ ಪೇಜ್‍ಗಳನ್ನು ಆರಂಭಿಸಲಾಗಿದ್ದು, ಪೇಜ್ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯವರು ತಮಗೆ ಸಂಬಂಧಿಸಿದವರೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಕಾರ್ಯವೂ ನಡೆಯಲಿದೆಯೆಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಂದಿಲ್ಲ ಒಂದು ಯೋಜನೆಯನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಂಡಿದ್ದು, ಇಂತಹ ಫಲಾನುಭವಿಗಳನ್ನು ಅಭಿಯಾನದಡಿ ಸಂಪರ್ಕಿಸುವ ಮತ್ತು ಅವರ ಅನಿಸಿಕೆಗಳನ್ನು ಡಿಜಿಟಲ್ ಪ್ರಚಾರಕ್ಕೆ ಒಳಪಡಿಸುವ ಪ್ರಯತ್ನಗಳು ನಡೆಯಲಿದೆ. ಆ ಮೂಲಕ ಪಕ್ಷದ ಸಂಘಟನಾ ಶಕ್ತಿಯನ್ನು ಹೆಚ್ಚಿಸುವ ವಿಶ್ವಾಸವಿದೆ ಎಂದರು.

ಒಂದು ಲಕ್ಷ ಸದಸ್ಯರ ಗುರಿ: ರಾಜ್ಯ ವ್ಯಾಪಿ ಒಂದು ಕೋಟಿ ಸದಸ್ಯತ್ವವನ್ನು ಪಡೆಯುವ ಗುರಿಯನ್ನು ಬಿಜೆಪಿ ಹೊಂದಿದ್ದು, ಕೊಡಗಿನಲ್ಲಿ ಒಂದು ಲಕ್ಷ ಸದಸ್ಯತ್ವ ನಮ್ಮ ಗುರಿಯಾಗಿದೆ. ಪಕ್ಷದ ಮೊಬೈಲ್‍ಗೆ ಒಂದು ಮಿಸ್ ಕಾಲ್ ಮಾಡುವ ಮೂಲಕ ಸದಸ್ಯತ್ವವನ್ನು ಪಡೆಯಬಹುದಾಗಿದೆಯೆಂದು ರಾಬಿನ್ ದೇವಯ್ಯ ಮಾಹಿತಿಯಿತ್ತರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!