ಯಡಿಯೂರಪ್ಪ-ವಿಜೇಂದ್ರ ಇಬ್ಬರೂ ಬಿಜೆಪಿಗೆ ಅನಿವಾರ್ಯ: ಸಚಿವ ಚಲುವರಾಯಸ್ವಾಮಿ

ಹೊಸದಿಗಂತ ವರದಿ, ಮಂಡ್ಯ :

ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಇಬ್ಬರೂ ಅನಿವಾರ್ಯವಾಗಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ಆ ಸಮಯದಲ್ಲೇ ವಿಜಯೇಂದ್ರ ಅವರಿಗೆ ಉತ್ತಮ ಸ್ಥಾನ ಕೊಡಬೇಕಿತ್ತು. ಕೊಡಲಿಲ್ಲ. ಬಿಜೆಪಿ ಪ್ರಯೋಗಗಳು ನೆಲಕಚ್ಚಿದವು. ಬಿಜೆಪಿಯೊಳಗೆ ಮನಸ್ಸುಗಳೆಲ್ಲಾ ಒಡೆದುಹೋಗಿವೆ. ಅವರೀಗ ಗೊಂದಲದಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ವಿರೋಧಪಕ್ಷದ ನಾಯಕರು ಅವರಿಗೆ ಸಿಕ್ಕಿಲ್ಲ. ಈಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲಿಗೆ ಯಡಿಯೂರಪ್ಪ ಮತ್ತು ಅವರ ಕುಟುಂಬ ಬಿಜೆಪಿಗೆ ಅನಿವಾರ್ಯವಾಗಿದೆ ಎಂದು ಕುಟುಕಿದರು.

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದು ಕಷ್ಟವಿದೆ. ಅವರೇನು ಪ್ರೀತಿಯಿಂದ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸಿಲ್ಲ. ಅನಿವಾರ್ಯದಿಂದ ಮಾಡಿದ್ದಾರೆ ಅಷ್ಟೆ. ಕುಮಾರಸ್ವಾಮಿ ಅವರೂ ಪ್ರೀತಿಯಿಂದ ಬಿಜೆಪಿಗೆ ಹೋಗಿಲ್ಲ. ಅನಿವಾರ್ಯವಾಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಬಿಜೆಪಿ ಕಷ್ಟ ನೋಡಿ ಅಯ್ಯೋ ಪಾಪ ಎನಿಸುತ್ತಿದೆ. ಬಿಜೆಪಿಯೊಳಗೆ ಮನಸ್ತಾಪ ದೊಡ್ಡ ಪ್ರಮಾಣದಲ್ಲಿರುವುದರಿಂದ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗುವುದು ಕಷ್ಟವಾಗಲಿದೆ ಎಂದು ಭವಿಷ್ಯ ನುಡಿದರು.

ಯಾವ ವಿಚಾರ ಹೇಳಿದ್ದಾರೋ ಗೊತ್ತಿಲ್ಲ
ಅಧಿಕಾರಿ ವರ್ಗಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪವಿರುವ ಬಗ್ಗೆ ಕೇಳಿದಾಗ, ಮೈಸೂರು ಜಿಲ್ಲೆಯಲ್ಲಿ ಹಾಗೂ ಪಕ್ಷದಲ್ಲಿ ಯತೀಂದ್ರ ಪ್ರಮುಖವಾದ ಲೀಡರ್. ಮಾಜಿ ಎಂಎಲ್ಎಗಳು ಕೆಲಸ ಮಾಡೋದನ್ನು ತಪ್ಪು ಎನ್ನಲಾಗದು. ಯಾರನ್ನೂ ಟಾರ್ಗೆಟ್ ಮಾಡುವ ನೇಚರ್ ಯತೀಂದ್ರ ಅವರದ್ದಲ್ಲ. ವಿಡಿಯೋದಲ್ಲಿ ಯಾವ ವಿಚಾರ ಹೇಳಿದ್ದಾರೋ ಏನೋ ಗೊತ್ತಿಲ್ಲ. ಯಾರು ಆ ವಿಡಿಯೋ ಕಟ್ ಅಂಡ್ ಪೇಸ್ಟ್‌ ಮಾಡಿದ್ರೋ ಗೊತ್ತಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ಕೆಲವರು ಕಟ್ ಅಂಡ್ ಪೇಸ್ಟ್‌ ಮಾಡುತ್ತಾರೆ. ಮಾತಾಡಿದ ರೀತಿ ಬೇರೆ ಇರುತ್ತೆ, ತೋರಿಸೋದು ಬೇರೆ ಇರುತ್ತೆ. ಯತೀಂದ್ರ ಒಬ್ಬರು ಒಳ್ಳೆಯ ವ್ಯಕ್ತಿ ಎಂದು ಸಮರ್ಥಿಸಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!