ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಲ್ಲಿ ನಿರಂತರ ಮಳೆಯ ನಂತರ, ಬ್ರಹ್ಮಪುತ್ರ ನದಿಯ ಪ್ರವಾಹವು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವನ್ನು ಪ್ರವೇಶಿಸಿ 233 ಶಿಬಿರಗಳಲ್ಲಿ 61 ಶಿಬಿರಗಳನ್ನು ಮುಳುಗಿಸಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಫೀಲ್ಡ್ ಡೈರೆಕ್ಟರ್ ಸೋನಾಲಿ ಘೋಷ್ ಅವರು ಹಂಚಿಕೊಂಡ ವರದಿಗಳ ಪ್ರಕಾರ, ಅಗೋರಟೋಲಿ ಶ್ರೇಣಿಯ 22 ಅರಣ್ಯ ಶಿಬಿರಗಳು, ಕಾಜಿರಂಗ ಶ್ರೇಣಿಯ 10, ಬಾಗೋರಿ ಶ್ರೇಣಿಯಲ್ಲಿ 8, ಬುರಾಪಹಾರ್ ಶ್ರೇಣಿಯಲ್ಲಿ 5, ಬೊಕಾಖಾತ್ ಶ್ರೇಣಿಯ 6 ಅರಣ್ಯ ಶಿಬಿರಗಳು ನೀರಿನಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ.
ಉದ್ಯಾನದ ಅಧಿಕಾರಿಗಳು ಕಾಡು ಪ್ರಾಣಿಗಳ ಸುರಕ್ಷತೆ ಮತ್ತು ಭದ್ರತೆಗೆ ಕ್ರಮಗಳನ್ನು ಕೈಗೊಂಡಿದ್ದಾರೆ. ಉದ್ಯಾನದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 37 ರಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ಅಧಿಕಾರಿಗಳು ಈಗಾಗಲೇ ಉದ್ಯಾನದ ಪ್ರದೇಶದ ವಿವಿಧ ಸ್ಥಳಗಳಲ್ಲಿ ಸ್ಪೀಡ್ ಸೆನ್ಸಾರ್ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.