ಜನಿವಾರ ಹಾಕಿದ್ದಕ್ಕಾಗಿ ಬ್ರಾಹ್ಮಣ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗಿಲ್ಲ ಎಂಟ್ರಿ!

ಹೊಸದಿಗಂತ ವರದಿ, ಬೀದರ್:

ಜನಿವಾರ ಹಾಕಿದ ಕಾರಣದಿಂದ ಬ್ರಾಹ್ಮಣ ವಿದ್ಯಾರ್ಥಿಯೊಬ್ಬನಿಗೆ ಸಿಇಟಿ ಪರೀಕ್ಷೆಗೆ ಅವಕಾಶ ನೀಡದೆ ವಾಪಸ್ ಕಳಿಸಿದ ಜಾತಿನಿಂದನೆ, ಅಮಾನವೀಯ ಪ್ರಕರಣ ಸಾಮಾಜಿಕ ಸಮಾನತೆ ಸಂದೇಶ ಸಾರಿದ ಬಸವನಾಡು, ಶರಣಭೂಮಿ ಬೀದರ್ ನಲ್ಲಿ ನಡೆದಿದೆ.

ಬೀದರ್ ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಸಾಯಿಸ್ಫೂರ್ತಿ ಕಾಲೇಜಿನ ಕೇಂದ್ರದಲ್ಲಿ ಗುರುವಾರ ಈ ಘಟನೆ ನಡೆದಿದೆ. ಕೇಂದ್ರದೊಳಗೆ ಪ್ರವೇಶ ನೀಡುವಾಗ ತಪಾಸಣೆ ಮಾಡುವ ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗಳು ವಿದ್ಯಾರ್ಥಿ ಸುಚಿವೃತ ಕುಲಕರ್ಣಿ ಎಂಬಾತನಿಗೆ ತಪಾಸಣೆ ಮಾಡುವ ವೇಳೆ ಜನಿವಾರ ಹಾಕಿದ್ದಕ್ಕೆ ತಗಾದೆ ತೆಗೆದಿದ್ದಾರೆ. ಈ ದಾರ (ಜನಿವಾರ) ಹಾಕಿ ಪರೀಕ್ಷೆಗೆ ಬಂದರೆ‌ ಹೇಗೆ?‌ ಇದರೊಳಗೆ ಕ್ಯಾಮರಾ ಇದ್ದರೆ ಹೇಗೆ? ಒಳಗಡೆ ಹೋದಾಗ ಇದನ್ನೇ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆ? ಎಂಬಿತ್ಯಾದಿ ಅಸಂಬದ್ಧ ವಿಷಯ ಪ್ರಸ್ತಾಪಿಸಿ, ಇದನ್ನು ತೆಗೆದು ಬಾ ಎಂದು ಹಿಯಾಳಿಸಿದ್ದಾರೆ.

ಜನಿವಾರ ತೆಗೆಯುವುದಿಲ್ಲ. ಜನಿವಾರ ತೆಗೆಯಬೇಕೆಂಬ ನಿಯಮವೂ ಇಲ್ಲ ಎಂದು ವಿದ್ಯಾರ್ಥಿ ಹೇಳಿದಾಗ, ಆತನೊಂದಿಗೆ ಅಸಭ್ಯ ವರ್ತಿಸಿದ ಸಿಬ್ಬಂದಿ, ಈತನಿಗೆ ಬೈದು ಪರೀಕ್ಷಾ ಕೋಣೆಗೆ ಪ್ರವೇಶ ಕೊಡದೆ ವಾಪಸ್ ಕಳಿಸಿದ್ದಾರೆ.‌ ಸಿಬ್ಬಂದಿ ಈ ವರ್ತನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿ ಸುಚಿವೃತ ಗಣಿತ ಪರೀಕ್ಷೆ ಬರೆಯಲಾಗದೆ ಕಣ್ಣೀರಿಟ್ಟು ವಾಪಸ್ ತೆರಳಿದ್ದಾನೆ.

ಜಾತಿ ನಿಂದನೆ ಮಾಡಿ, ವಿನಾಕಾರಣ ವಿದ್ಯಾರ್ಥಿಗೆ ಪರೀಕ್ಷೆಯಿಂದ ವಂಚಿತಗೊಳಿಸಿದ ಸಿಬ್ಬಂದಿಯ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಕಿಡಿಕಾರಿದ ಸುಚಿವೃತ ಪಾಲಕರು, ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಹಾಗೂ ಜಿಲ್ಲಾದಿಕಾರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ವಿಚಾರಣೆ ನಡೆಯುತ್ತಿದೆ.

ಮಹಾಸಭೆ ಆಕ್ರೋಶ: ಜನಿವಾರ ಹಾಕಿದ್ದಕ್ಕೆ ಆಕ್ಷೇಪಿಸಿ ಸಿಇಟಿಯಂತಹ ಮಹತ್ವದ ಪರೀಕ್ಷೆಯಿಂದ ವಂಚಿತಗೊಳಿಸಿ ವಿದ್ಯಾರ್ಥಿ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ ಹುಮನಾಬಾದ್ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!