ಬ್ರಹ್ಮೋಸ್ ಕ್ಷಿಪಣಿಯ ‘ಡಬಲ್ ಹಿಟ್’ ಪರೀಕ್ಷೆ ಯಶಸ್ವಿ: ಸಮುದ್ರದಲ್ಲಿ ಮುಳುಗಿದ ನೌಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಬ್ರಹ್ಮೋಸ್ ಕ್ಷಿಪಣಿಯ ‘ಡಬಲ್ ಹಿಟ್’ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, ನೌಕೆ ಮತ್ತು ಯುದ್ಧ ವಿಮಾನದ ಮೂಲಕ ಒಂದೇ ಗುರಿ ಧ್ವಂಸ ಮಾಡುವ ಪರೀಕ್ಷೆ ಯಶಸ್ವಿಯಾಗಿದೆ.

ಭಾರತೀಯ ವಾಯುಪಡೆ ಯುದ್ಧ ನೌಕೆ ಮತ್ತು ಯುದ್ಧ ವಿಮಾನ ಸುಖೋಯ್30 ಜೆಟ್ ನಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದ್ದು, ಎರಡೂ ಪರೀಕ್ಷೆಯಲ್ಲಿ ಒಂದೇ ಗುರಿ ನಿಗದಿ ಪಡಿಸಲಾಗಿತ್ತು. ಎರಡೂ ಮಾರ್ಗದಲ್ಲಿ ಒಂದೇ ಗುರಿಯನ್ನು ಧ್ವಂಸ ಮಾಡುವಲ್ಲಿ ಕ್ಷಿಪಣಿ ಯಶಸ್ವಿಯಾಗಿದೆ.

ಈಶಾನ್ಯ ಸಮುದ್ರ ತೀರದಲ್ಲಿ ಭಾರತೀಯ ನೌಕಾಪಡೆಯ ಸಹಕಾರದೊಂದಿಗೆ ಭಾರತೀಯ ವಾಯುಪಡೆ ಸುಖೋಯ್-30 ಜೆಟ್ ಯುದ್ಧ ವಿಮಾನದ ಮೂಲಕ ನಿಖರ ಗುರಿ ತಲುಪುವ ಪರೀಕ್ಷೆ ಮಾಡಿತ್ತು. ಈ ವೇಳೆ ಮೊದಲು ನೌಕಾ ಮಾರ್ಗವಾಗಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. ಐಎನ್‌ಎಸ್ ಡೆಲ್ಲಿ ಯುದ್ಧನೌಕೆ ಮೂಲಕ ಕ್ಷಿಪಣಿ ಪ್ರಯೋಗ ಮಾಡಲಾಗಿದ್ದು, ಈ ವೇಳೆ ಕ್ಷಿಪಣಿಗೆ ಗುರಿಯಾಗಿ ಮತ್ತೊಂದು ನೌಕೆಯನ್ನು ನೀಡಲಾಗಿತ್ತು. ಮೊದಲ ಪರೀಕ್ಷೆಯಲ್ಲಿ ನೌಕೆಯನ್ನು ಹೊಡೆದುರುಳಿಸುವಲ್ಲಿ ಕ್ಷಿಪಣಿ ಯಶಸ್ವಿಯಾಗಿತ್ತು. ಬಳಿಕ ಭಾರತೀಯ ವಾಯುಪಡೆಯ Su-30MKI ಯುದ್ಧ ವಿಮಾನದ ಮೂಲಕ ವಾಯುನೆಲೆಯಿಂದ ಹೊರಟು ಅದೇ ಹಡಗಿನ ಮೇಲೆ ದಾಳಿ ಮಾಡಿತ್ತು. ಈ ವೇಳೆಯೂ ಬ್ರಹ್ಮೋಸ್ ಕ್ಷಿಪಣಿ ಹಡಗನ್ನು ಯಶಸ್ವಿಯಾಗಿ ಹೊಡೆದರುಳಿಸಿತ್ತು.
ಇನ್ನು ಸಿಡಿತಲೆಯೊಂದಿಗೆ ಕ್ಷಿಪಣಿ ಸತತ ಎರಡು ಬಾರಿ ಹೊಡೆದ ಪರಿಣಾಮ ಹಡಗು ಭಾರಿ ಹಾನಿಗೀಡಾಗಿ ಸಮುದ್ರದಲ್ಲೇ ಮುಳುಗಿತು ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ವಾಯುಸೇನೆ ಮತ್ತು ನೌಕಾದಳದ ಅಧಿಕಾರಿಗಳು, ಕ್ಷಿಪಣಿಯು ಪ್ರತೀ ಗಂಟೆಗೆ 3000 ಕಿ.ಮೀ ವೇಗದಲ್ಲಿ ಗುರಿಯನ್ನು ನಿಖರವಾಗಿ ಧ್ವಂಸ ಮಾಡಿದೆ. ಕ್ಷಿಪಣಿಯ ಈ ವೇಗವು ಶತ್ರುರಾಷ್ಟ್ರಗಳ ವಾಯು ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಂಡು ಗುರಿಯನ್ನು ತಲುಪಲು ನೆರವಾಗುತ್ತದೆ. ಈ ವೇಗದಲ್ಲಿ ಕ್ಷಿಪಣಿಯನ್ನು ಗುರುತಿಸುವುದೂ ಕೂಡ ಕಷ್ಟಕರವಾಗುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!