ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ಮಾಣ ಹಂತದಲ್ಲಿರುವ ಬ್ರಿಡ್ಜ್ಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕಿ ಸಾವನ್ನಪ್ಪಿದ್ದು, 15 ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜೈಪುರದಲ್ಲಿ ನಡೆದಿದೆ. ಎನ್‌ಎಚ್ 52 ರ ಭೋಜ್ಲಾವಾ ಕಟ್ ಬಳಿ ಅಪಘಾತ ಸಂಭವಿಸಿದೆ. ಬ್ರಿಡ್ಜ್‌ನಿಂದ ಇಳಿಯುವಾಗ ಬಸ್ ಬ್ರೇಕ್ ಫೇಲ್ ಆದ ಕಾರಣ ನಿರ್ಮಾಣ ಹಂತದಲ್ಲಿದ್ದ ಮತ್ತೊಂದು ಬ್ರಿಡ್ಜ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಬಸ್ನಲ್ಲಿ 30-35 ಮಕ್ಕಳಿದ್ದರು.
ಡಿಕ್ಕಿ ಹೊಡೆದ ನಂತರ ಶಿಕ್ಷಕಿ ಬಸ್ನಿಂದ ಹೊರಗೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೆಲವು ಮಕ್ಕಳನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದ್ದು, ಕೆಲವು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಲಾ ಬಸ್ ನಿಯಮ ಉಲ್ಲಂಘಿಸಿ ವೇಗವಾಗಿ ಚಲಿಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದಲ್ಲದೇ ಸಾರಿಗೆ ಇಲಾಖೆಯ ನಿರ್ಲಕ್ಷ್ಯದಿಂದ ನಗರದಲ್ಲಿ ಪರ್ಮಿಟ್, ವಿಮೆ ಇಲ್ಲದೇ ಹಲವು ಶಾಲಾ ಬಸ್ ಗಳು ರಸ್ತೆಗಿಳಿದಿರುವುದು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ.