ತಿಮ್ಮಪ್ಪನ ಸನ್ನಿಧಿಯಲ್ಲಿ ಮಿತಿಮೀರಿದ ಭಕ್ತಗಣ: ವಿಐಪಿ ಬ್ರೇಕ್‌ ದರ್ಶನ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಮಲ ಬೆಟ್ಟ ಭಕ್ತಾದಿಗಳಿಂದ ತುಂಬಿ ತುಳುಕುತ್ತಿದೆ. ಒಂದೆಡೆ ಮಕ್ಕಳಿಗೆ ಬೇಸಿಗೆ ರಜೆ ಮತ್ತೊಂದೆಡೆ ವಾರದ ರಜೆಯಿಂದಾಗಿ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿನ ಎಲ್ಲಾ ವಿಭಾಗಗಳು ಭರ್ತಿಯಾಗಿದ್ದು, ಭಕ್ತರು ಹೊರಗೆ ಕಿಲೋಮೀಟರುಗಟ್ಟಲೆ ಸಾಲುಗಟ್ಟಿ ನಿಂತಿದ್ದಾರೆ.  ಶ್ರೀವಾರಿ ದರ್ಶನಕ್ಕೆ 48 ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರತಿ ಗಂಟೆಗೆ ಸುಮಾರು 8,000 ಭಕ್ತರು ಸರತಿ ಸಾಲಿನಲ್ಲಿ ಪ್ರವೇಶಿಸುತ್ತಾರೆ. ಗಂಟೆಗೆ 4 ಸಾವಿರ ಜನರಿಗೆ ಮಾತ್ರ ವೆಂಕಟೇಶ್ವರಸ್ವಾಮಿ ದರ್ಶನ ಭಾಗ್ಯ ಸಿಗಲಿದೆ ಆ ಸಂಖ್ಯೆ ಮೀರಿ ಭಕ್ತರಿಗೆ ದರ್ಶನ ನೀಡಲು ಸಾಧ್ಯವಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ವೈಕುಂಠ ಏಕಾದಶಿಯಲ್ಲಿ  ಆಗಮಿಸುವ ಭಕ್ತರಿಗಿಂತ ಈ ಬಾರಿ ಹೆಚ್ಚಿನ ಭಕ್ತರು ತಿರುಮಲಕ್ಕೆ ಬರುತ್ತಿದ್ದಾರೆ. ಭಕ್ತರ ಸಂಖ್ಯೆ ಒಮ್ಮೆಲೇ ಹೆಚ್ಚಾದ ಕಾರಣ ಟಿಟಿಡಿ ದಿಕ್ಕು ತೋಚದಂತಾಗಿದೆ ಅಷ್ಟು ಜನ ಭಕ್ತರನ್ನು ಸಂಭಾಳಿಸಲು ಕಷ್ಟವಾದ ಕಾರಣ ಮೂರು ದಿನಗಳ ಕಾಲ ವಿಐಪಿ ಬ್ರೇಕ್ ದರ್ಶನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಇನ್ನೂ ನಾಲ್ಕು ದಿನ ಜನದಟ್ಟಣೆ ಇರಲಿದೆ ಎಂದು ಟಿಟಿಡಿ ಇಒ ಧರ್ಮರೆಡ್ಡಿ ಹೇಳಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟಿಟಿಡಿ ತಿಳಿಸಿದೆ.

ಮತ್ತೊಂದೆಡೆ, ಸರತಿ ಸಾಲಿನಲ್ಲಿ ನಿಂತ ಮಹಿಳೆಯರು ಮತ್ತು ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಟೋಕನ್‌ ತೆಗೆದುಕೊಳ್ಳಲು ಉಂಟಾದ ಕಾಲ್ತುಳಿತದಂತಹ ಘಟನೆಗಳು ಪುನರಾವರ್ತನೆಯಾಗದಂತೆ ಟಿಟಿಡಿ ಕ್ರಮ ಕೈಗೊಳ್ಳುತ್ತಿದೆ. ಈ ಬಗ್ಗೆ  ಪರಿಶೀಲಿಸಿದ ಟಿಟಿಡಿ ಇಒ ಧರ್ಮರೆಡ್ಡಿ, ವೈಕುಂಠಂ ಸಂಕೀರ್ಣದ ಹೊರಗಿರುವವರ ಬಗ್ಗೆ ನಿಗಾ ವಹಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!