ಜೆಡಿಎಸ್’ನ ಅಹೋರಾತ್ರಿ ಪ್ರತಿಭಟನೆಗೆ ಕೆಲವೇ ಗಂಟೆಗಳಲ್ಲಿ ಬ್ರೇಕ್!

ಹೊಸದಿಗಂತ ವರದಿ, ಮಡಿಕೇರಿ:

‘ತಲೆಗೊಂದು ಸೂರು’ಗಾಗಿ ಒತ್ತಾಯಿಸಿ ಜಾತ್ಯತೀತ ಜನತಾ ದಳ ಹಮ್ಮಿಕೊಂಡಿದ್ಧ ಅಹೋರಾತ್ರಿ ಪ್ರತಿಭಟನೆಗೆ ಮೊದಲ ದಿನವೇ ಬ್ರೇಕ್ ಬಿದ್ದಿದೆ.
ತಲೆಗೊಂದು ಸೂರಿಗೆ ಒತ್ತಾಯಿಸಿ ಜಾತ್ಯತೀತ ಜನತಾ ದಳದ ವತಿಯಿಂದ ಮಡಿಕೇರಿ ನಗರಸಭೆ ಎದುರು ಅಹೋರಾತ್ರಿ ಪ್ರತಿಭಟನೆ‌ ನಡೆಸಲು ಯೋಜಿಸಲಾಗಿತ್ತು.
ಆದರೆ ಪ್ರತಿಭಟನೆ ನಡೆಸದಂತೆ ಪೌರಾಯುಕ್ತರು ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದರೆನ್ನಲಾಗಿದೆ.
ಆದರೆ ಬುಧವಾರ ದಿಢೀರ್ ಪ್ರತಿಭಟನೆ ಹಮ್ಮಿಕೊಂಡು ಮೆರವಣಿಗೆಯಲ್ಲಿ ನಗರಸಭೆಗೆ ಬಂದ ಪ್ರತಿಭಟನಾಕಾರರನ್ನು ಪೊಲೀಸರು ಪ್ರವೇಶದ್ವಾರದ ಬಳಿಯೇ ತಡೆದರು.
ಈ ಸಂದರ್ಭ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪ್ರತಿಭಟನೆ ನಡೆಸುವ ಸಂವಿಧಾನ ಬದ್ಧ ಹಕ್ಕಿಗೆ ಚ್ಯುತಿಯಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೆಶ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಪೊಲೀಸರ ತಡೆಯನ್ನು ಭೇದಿಸಿ ನಗರಸಭೆ ಆವರಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಮೂರು ದಿನಗಳ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಪೌರಾಯುಕ್ತ ರಾಮ್‌ದಾಸ್ ಅವರು ಒಂದು ತಿಂಗಳೊಳಗೆ ಸೂರಿಗೆ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರಲ್ಲದೆ, ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದರು.
ಆದರೆ ತಹಶೀಲ್ದಾರ್ ನೀಡಿದರೆ ಮಾತ್ರ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಾಗಿ ಪಟ್ಡು ಹಿಡಿದ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸಿದರು.
ತಹಶೀಲ್ದಾರ್ ಭೇಟಿ: ಸಂಜೆ ವೇಳೆ ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್ ಹಾಗೂ ಪೌರಾಯುಕ್ತ ರಾಮ್ ದಾಸ್ ಅವರು ಪ್ರತಿಭಟನಾ ಸ್ಥಳ ಭೇಟಿ ನೀಡಿ ಒಂದು ತಿಂಗಳೊಳಗೆ ಸೂರಿಲ್ಲದವರಿಗೆ ಸೂಕ್ತ ಸ್ಥಳ ಗುರುತಿಸುವುದಾಗಿ ಭರವಸೆ ನೀಡುವುದರೊಂದಿಗೆ ಪ್ರತಿಭಟನೆ‌ ಕೈಬಿಡುವಂತೆ ಮನವಿ ಮಾಡಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು, ಒಂದು ತಿಂಗಳೊಳಗೆ ಸೂಕ್ತ ಪರಿಹಾರ ದೊರಕದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡುವುದರೊಂದಿಗೆ ತಮ್ಮ
ಅಹೋರಾತ್ರಿ ಪ್ರತಿಭಟನೆಗೆ ಮಂಗಳ ಹಾಡಿದರು.
ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲೀಲಾ ಶೇಷಮ್ಮ, ಜೆ.ಡಿ.ಎಸ್ ಯುವ ಘಟಕದ ಜಿಲ್ಲಾ ವಕ್ತಾರ ರವಿ‌ ಕಿರಣ್, ಯುವ ಘಟಕದ ನಗರಾಧ್ಯಕ್ಷ ಮೊನೀಶ್, ಸಂಜು ಕಾವೇರಪ್ಪ, ಸೂರಿಲ್ಲದವರೆನ್ನಲಾದ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!